ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರದ ಅಸಮರ್ಥತೆಯಿಂದಾಗಿ ಕೋವಿಡ್ ನಿಂದ ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಜನ ಔಷಧಿ, ಆಕ್ಸಿಜನ್, ಲಸಿಕೆ ಸಿಗದೆ ಪರದಾಟ ನಡೆಸಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು 100 ಡೋಸ್ ಲಸಿಕೆ ಕೊಟ್ಟಿದ್ದೇವೆ ಎಂದು ಸಂಭ್ರಮಿಸಿ ಪ್ರಚಾರ ಪಡೆಯುವ ಬದಲು, ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದುಗೋಷ್ಠಿಯಲ್ಲಿ ಮಾತನಾಡಿದ ಅವರು, 100 ಕೋಟಿ ಲಸಿಕೆ ಕೊಟ್ಟಿದ್ದೇವೆ ಎಂದು ಸಂಭ್ರಮಿಸುತ್ತಾ ಪ್ರಚಾರ ಪಡೆಯುತ್ತಿರುವ ಕೇಂದ್ರ ಸರ್ಕಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ಎಷ್ಟು ಲಸಿಕೆ, ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಲಸಿಕೆ ನೀಡಲಾಗಿದೆ ಎಂಬುದನ್ನು ಜನರಿಗೆ ತಿಳಿಸಲಿ’ ಎಂದು ಆಗ್ರಹಿಸಿದರು.
ಇಂದು ದೇಶದ ಪ್ರಧಾನಮಂತ್ರಿಗಳು ಹಾಗೂ ಆರೋಗ್ಯ ಸಚಿವರು 100 ಕೋಟಿ ಲಸಿಕೆ ನೀಡಿದ್ದೇವೆ ಎಂದು ಸಂಭ್ರಮಿಸುತ್ತಿದ್ದಾರೆ. ಕೋವಿಡ್ ಇಡೀ ವಿಶ್ವದಲ್ಲಿ ಜನರನ್ನು ಯಾವ ರೀತಿ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ನಾವೆಲ್ಲರೂ ನೋಡಿದ್ದೇವೆ. ಈ ಸಮಯದಲ್ಲಿ ಜನರಿಗೆ ಸ್ಪಂದಿಸುವ ವಿಚಾರದಲ್ಲಿ ಸರ್ಕಾರ ಹಾಗೂ ನಾವೆಲ್ಲ ವಿಫಲರಾಗಿದ್ದೇವೆ. ಈ ಸಂದರ್ಭದಲ್ಲಿ ಜನ ಸರ್ಕಾರದ ಮೇಲೆ ಅವಲಂಬಿಸುವುದು ಸಹಜ. ವಿರೋಧ ಪಕ್ಷವಾಗಿ ನಾವು ಎಲ್ಲ ರೀತಿಯ ಸಹಕಾರ ನೀಡಿದ್ದೇವೆ ಎಂದರು.
100 ಕೋಟಿ ಲಸಿಕೆ ವಿಚಾರ ಸಂಭ್ರಮಿಸುವ ವಿಚಾರವಲ್ಲ. ಪ್ರತಿಯೊಬ್ಬ ನಾಗರೀಕನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೋವಿಡ್ ಮಹಾಮಾರಿ ಸಂಕಟ ತಟ್ಟಿದೆ. ಈ ಮಧ್ಯೆ ಎಷ್ಟು ಜನ ಸತ್ತಿದ್ದಾರೆ ಎಂಬ ನೈಜ ಅಂಕಿ ಅಂಶ ಸರ್ಕಾರ ನೀಡುತ್ತಿಲ್ಲ. ಕೋವಿಡ್ ಬಂದಾಗ ಅವೈಜ್ಞಾನಿಕವಾಗಿ ಗಂಟೆ, ತಟ್ಟೆ ಬಾರಿಸಿದರೆ ಹೊರತು, ಅದನ್ನು ಯಾವ ರೀತಿ ಎದುರಿಸಬೇಕು ಎಂದು ಹೇಳುವ ಪ್ರಯತ್ನ ಮಾಡಲಿಲ್ಲ. ಆರೋಗ್ಯ ಸಚಿವರು ಇಂದು ನೀಡಿರುವ ಮಾಹಿತಿಯಲ್ಲಿ ಈ 100 ಕೋಟಿ ಲಸಿಕೆ ಕೊಟ್ಟಿರೋದು 1 ಲಸಿಕೆ ಮಾತ್ರ. ಅದಕ್ಕೆ ಇವರು ಸಂಭ್ರಮಿಸುತ್ತಿದ್ದಾರೆ. 70 ಕೋಟಿ ಜನರಿಗೆ ಒಂದು ಡೋಸ್, ಕೇವಲ 20-30 ಕೋಟಿ ಜನರಿಗೆ 2 ಡೋಸ್ ಲಸಿಕೆ ನೀಡಲಾಗಿದೆ. ಇಡೀ ವಿಶ್ವದಲ್ಲೇ ಲಸಿಕೆ ಉತ್ಪಾದನೆಯಲ್ಲಿ ಅಗ್ರಸ್ಥಾನ ಪಡೆದಿರುವ ಭಾರತದಲ್ಲಿ ಇಷ್ಟು ದಿನಗಳಲ್ಲಿ ಕೇವಲ ಒಂದು ಡೋಸ್ ಮಾತ್ರ ನೀಡುತ್ತಿರುವುದು ಸಂಭ್ರಮಿಸುವ ವಿಚಾರವೇ ಎಂದು ಪ್ರಶ್ನಿಸಿದರು.