ಬೆಂಗಳೂರು: ಹೊಸ ಪಠ್ಯ ಪುಸ್ತಕ ಹೊರ ಬಂದಾಗಿನಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆಲವೊಂದು ಪಾಠಗಳಲ್ಲಿ ಮುಖ್ಯವಾದ ಅಂಶಗಳನ್ನೆ ಬಿಟ್ಟಿರುವ ಬಗ್ಗೆ ಚರ್ಚೆಯಾಗಿದೆ. ಅದರಲ್ಲೂ ಅಂಬೇಡ್ಕರ್ ವಿಚಾರದಲ್ಲಿಯೂ ಅಂತದ್ದೊಂದು ಪ್ರಮಾದವಾಗಿದೆ. ಸಂವಿಧಾನ ಶಿಲ್ಪಿ ಎಂಬುದನ್ನೆ ಕೈಬಿಟ್ಟಿದ್ದಾರೆ.
ಡಾ. ಅಂಬೇಡ್ಕರ್ ಕುರಿತ ಪಠ್ಯದ ವಿಚಾರದಲ್ಲಾದ ಮಿಸ್ಟೇಕ್ ಬಗ್ಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ನಾಗೇಶ್ ಅವರು ಪ್ರಮಾದವನ್ನು ಸರಿಪಡಿಸಿ ಹೊಸದಾಗಿ ಪಾಠವನ್ನು ಮುದ್ರಿಸುವುದಾಗಿ ಸೂಚನೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿರುವ ಅನುಸೂಚಿತ ಜಾತಿ, ಪಂಗಡ ಕಲ್ಯಾಣ ಸಮಿತಿ ಅಧ್ಯಕ್ಷ ಶಾಸಕ ಎಂ.ಪಿ.ಕುಮಾರಸ್ವಾಮಿ, ಶಿಕ್ಷಣ ಸಚಿವರ ನಡೆಯನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.
ರೋಹಿತ್ ಚಕ್ರವರ್ತಿ ನೇತೃತ್ವದ 2021-22ನೇ ಸಾಲಿನ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದ “ನಮ್ಮ ಸಂವಿಧಾನ” ಪಾಠದಲ್ಲಿ ಸಂವಿಧಾನದ ಆತ್ಮವೇ ಆಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಸಂಬೋದಿಸುವ ನಾಮಾಂಕಿತವನ್ನು ಸಮಿತಿ ಕೈಬಿಟ್ಟಿತ್ತು. ಈ ಕುರಿತಂತೆ ಪತ್ರ ಶಿಕ್ಷಣ ಸಚಿವ ನಾಗೇಶ್ ಅವರಿಗೆ ಪತ್ರ ಬರೆದಿರುವ ಅವರು, ಡಾ.ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಏಕೆ ಸಂಬೋದಿಸುತ್ತಾರೆ ಎಂಬುದನ್ನು ಸಂವಿಧಾನ ರಚನಾ ಸಮಿತಿ ಸದಸ್ಯರಲ್ಲಿ ಒಬ್ಬರಾದ ಟಿ.ಟಿ.ಕೃಷ್ಣಾಮಾಚಾರಿಯವರು ಸಂವಿಧಾನ ರಚನಾ ಸಭೆಯಲ್ಲಿ ದಾಖಲು ಮಾಡಿರುವುದನ್ನು ಪಠ್ಯ ಪಾಠದಲ್ಲಿ ರಾಜ್ಯ ಸರ್ಕಾರ ಮುದ್ರಣ ಮಾಡುವುದರ ಮೂಲಕ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬಗ್ಗೆ ಹೊಂದಿರುವ ಬದ್ಧತೆಯನ್ನು ಪ್ರದರ್ಶಿಸಬೇಕೆಂದು ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.