ಚಳ್ಳಕೆರೆ : ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾದಲ್ಲಿ ಭಗವಂತನು ಅಂತಹ ವ್ಯಕ್ತಿಗಳನ್ನು ಕಷ್ಟಕಾಲದಲ್ಲಿ ಕೈ ಬಿಡುವುದಿಲ್ಲವೆಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.
ನಗರದಲ್ಲಿ ಮಹಾವೀರ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಜೈನ ಸಮಾಜದವರು ಸಾರ್ವಜನಿಕ ಆಸ್ಪತ್ರೆಯ ಬಡರೋಗಿಗಳಿಗೆ ಬ್ರೆಡ್ ಹಾಲು ಮತ್ತು ಹಣ್ಣು ವಿತರಿಸುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಡಿವಿಜಿಯವರು ಹೇಳಿದ ಹಾಗೆ ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ ಕಲ್ಲು ಸಕ್ಕರೆಯಾಗು ದೀನದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಸಂದೇಶ ಇವತ್ತಿನ ಸಮಾಜಕ್ಕೆ ಸ್ಪೂರ್ತಿ ಮತ್ತು ದಾರಿದೀಪವಾಗಿದೆ.
ಸಮಾಜಮುಖಿ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಲ್ಲಿ ಪರಮಾತ್ಮನ ಅನುಗ್ರಹ ದೊರೆಯುತ್ತದೆ. ಜೈನ ಸಮಾಜ ಸಮುದಾಯದವರು ಮಾಡುತ್ತಿರುವಂತಹ ಈ ಮಹತ್ಕಾರ್ಯ ಸತ್ ಕಾರ್ಯವಾಗಿದೆ. ಸಮಾಜದಲ್ಲಿ ಅದೆಷ್ಟೋ ಜನ ಅನ್ನ ಬಟ್ಟೆ ಸೂರು ಇಲ್ಲದೆ ಬದುಕುತ್ತಿದ್ದಾರೆ.
ಇವರಿಗೆ ಅವಶ್ಯಕ ನೆರವನ್ನು ಒದಗಿಸಿ ಸಾರ್ಥಕತೆಯನ್ನು ಪಡೆಯೋಣ. ಹಾಗೆಯೇ ಹೆಚ್ಚು ಹೆಚ್ಚು ಸಂಘ-ಸಂಸ್ಥೆಗಳು ಮತ್ತು ಸಮುದಾಯದ ಜನ ಇಂತಹ ಮಹತ್ಕಾರ್ಯ ಗಳಿಗೆ ಭಾಗಿಯಾಗಿ ಎಂದು ಕರೆ ಕೊಟ್ಟರು.
ಈ ಸಮಾರಂಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ತಿಪ್ಪೇಸ್ವಾಮಿ ಜೈನ ಸಮುದಾಯದ ಅಧ್ಯಕ್ಷರಾದ ಭರತ್ ರಾಜು, ದರ್ಶನ್, ಮುತ್ತರಾಜು, ನವೀನ್, ರತ್ನರಾಜು, ರಾಘವೇಂದ್ರ, ಹಿತೇಶ್, ಉತ್ತಮ್ ಮತ್ತು ಗೌರಿಪುರ ಪಾರ್ಶ್ವನಾಥ ಜೈನ್ ಉಪಸ್ಥಿತರಿದ್ದರು.