ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಯ ಸಮಸ್ಯೆ ಬಗೆ ಹರಿಯುತ್ತಿಲ್ಲ. ಅದರಿಂದಾಗಿ ಅದೆಷ್ಟೋ ಪ್ರಾಣಗಳು ಹೋಗಿವೆ. ಗುಂಡಿ ತಪ್ಪಿಸಲು ಹೋಗಿ ಪ್ರಾಣ ಕಳೆದುಕೊಂಡವರಿದ್ದಾರೆ. ಅಷ್ಟೇ ಅಲ್ಲ ಮಳೆ ಬಂದರಂತು ಎಲ್ಲಿವೆ ಗುಂಡಿಗಳು ಎಂಬುದು ಕಾಣದೆ ಅದೆಷ್ಟೋ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ.
ಆದ್ರೆ ಅಧಿಕಾರಿಗಳು ಮಾತ್ರ ರಸ್ತೆ ಗುಂಡಿ ಮುಚ್ಚುವುದರಲ್ಲಿ ವಿಫಲರಾಗಿದ್ದಾರೆ. ಕ್ಯಾರೆ ಎನ್ನದೆ ಇರುವ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಸ್ಥಳೀಯರು, ಇದೀಗ ಅಧಿಕಾರಿಗಳಿಗೆ ಪಿಂಡ ಇಟ್ಟಿದ್ದಾರೆ. ಯಲಹಂಕ ವ್ಯಾಪ್ತಿಯ ಕೆ.ಆರ್ ಪುರಂ ಮತ್ತು ಬೆಟ್ಟಗಳ್ಳಿ ರಸ್ತೆಯ ಗುಂಡಿಯೊಂದರಲ್ಲಿ ಬಿಬಿಎಂಪಿ ಚೀಫ್ ಕಮಿಷನರ್ ಗೌರವ್ ಗುಪ್ತಾ ಹಾಗೂ ಚೀಫ್ ಎಂಜಿನಿಯರ್ ಹೆಸರಿನಲ್ಲಿ ಪಿಂಡ ಪ್ರದಾನ ಮಾಡಿದ್ದಾರೆ.
ಗುಂಡಿ ಮುಚ್ಚದ ಅಧಿಕಾರಿಗಳಿಗೆ ಪಿಂಡ ಇಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಅಭಿವೃದ್ಧಿ ಹೆಸರಲ್ಲಿ ಸಾವಿರಾರು ಕೋಟಿ ಖರ್ಚು ಮಾಡಿರುವುದಾಗಿ ಬಿಬಿಎಂಪಿ ಬಾಯಿ ಬಡಿದುಕೊಳ್ಳುತ್ತಿದೆ. ಆದರೆ ಯಲಹಂಕ ವ್ಯಾಪ್ತಿಯ ಒಂದೇ ಒಂದು ರಸ್ತೆಯೂ ಸರಿಯಿಲ್ಲ. ರಸ್ತೆ ಗುಂಡಿಗಳಿಂದ ಪ್ರತಿನಿತ್ಯ ಹತ್ತಾರು ಸವಾರರು ಬಿದ್ದು ಸಾವು ನೋವಿಗೀಡಾಗುತ್ತಿದ್ದಾರೆ. ಈ ಬಗ್ಗೆ ಹಲವು ಮಾರಿ ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ. ಹಾಗಾಗಿ ಇವತ್ತು ಅಧಿಕಾರಿಗಳಿಗೆ ಪಿಂಡ ಪ್ರದಾನ ಮಾಡುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.