ಬೆಂಗಳೂರು: ಗುತ್ತಿಗೆದಾರರಿಂದ 40% ಕಮಿಷನ್ ತೆಗೆದುಕೊಳ್ಳುವ ವಿಚಾರ ಸಂಬಂಧ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೆ 40% ಕಮೀಷನ್ ವಿಚಾರ ಮುನ್ನೆಲೆಗೆ ಬಂದಿದೆ. ಇದರಿಂದ ಸಚಿವ ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಒತ್ತಾಯ ಕೇಳಿ ಬಂದಿದೆ.
ಗುತ್ತಿಗೆದಾರನಿಂದ ಸಚಿವ ಈಶ್ವರಪ್ಪ ಕಮಿಷನ್ ಕೇಳಿದ ಆರೋಪದ ಬಗ್ಗೆ ಇಂದು ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿದ್ದು, 40 ಪರ್ಸೆಂಟ್ ಕಮಿಷನ್ ಬಗ್ಗೆ ಪರಿಷತ್ ನಲ್ಲಿ ಚರ್ಚೆಗೆ ಕೇಳಿದ್ದೇವೆ ಎಂದಿದ್ದಾರೆ.
ಇನ್ನು ದಿನದಿಂದ ದಿನಕ್ಕೆ ಕಮಿಷನ್ ಆರೋಪ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಇದನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ. ಸಚಿವ ಕೆ ಎಸ್ ಈಶ್ವರಪ್ಪ ತಕ್ಷಣ ರಾಜೀನಾಮೆ ನೀಡಬೇಕು. ಆರೋಪ ಮುಕ್ತರಾಗುವ ತನಕ ಸಂಪುಟದಲ್ಲಿ ಇರಬಾರದು ಎಂದು ಬಿ ಕೆ ಹರಿಪ್ರಸಾದ್ ಒತ್ತಾಯಿಸಿದ್ದಾರೆ.
ಇದೇ ವಿಚಾರಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಈ ಹಿಂದೆ ಈಶ್ವರಪ್ಪ ಅವರೇ ಗವರ್ನರ್ ಗೆ ಪತ್ರ ಬರೆದಿದ್ದರು. ಗುತ್ತಿಗೆದಾರರು ಕೂಡ ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. 40% ಕಮಿಷನ್ ಬಗ್ಗೆ ಆರೋಪಿಸಿಯೇ ಪತ್ರ ಬರೆದಿದ್ದಾರೆ. ಕೇವಲ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಮಾತ್ರವಲ್ಲ, ಇಡೀ ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.