ಬೆಂಗಳೂರು: ಉಪ ಚುನಾವಣೆ ಬಂದೊಡನೆ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ದೇವೇಗೌಡರು ತಮ್ಮ ಮನಸ್ಥಿತಿ ಕಳಕೊಂಡು ಮಾತನಾಡುತ್ತಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯರಾದ ಅಶ್ವತ್ಥನಾರಾಯಣ ಹೇಳಿದರು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಂದಗಿ, ಹಾನಗಲ್ ಚುನಾವಣೆ ಬಂದ ಬಳಿಕ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರು ಕೂಗುಮಾರಿಗಳ ರೀತಿಯಲ್ಲಿ ಜವಾಬ್ದಾರಿರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ಆರ್ ಎಸ್ ಎಸ್ ಬಗ್ಗೆ ಆಧಾರರಹಿತ ಹೇಳಿಕೆ ನೀಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಆರ್ ಎಸ್ ಎಸ್ ಮಾರ್ಗದರ್ಶನದಿಂದ ಗೆದ್ದ ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದನ್ನು ಮರೆತಿದ್ದಾರೆ.
ಆಗ ಆರ್ ಎಸ್ ಎಸ್ ಚಟುವಟಿಕೆ ಬಗ್ಗೆ ಅವರಿಗೆ ಪರಿಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದರು.
ಬ್ಲೂಫಿಲ್ಮ್ ಬಗ್ಗೆ ಕುಮಾರಸ್ವಾಮಿಯವರಿಗೆ ಯಾರು ತಿಳಿಸಿಕೊಟ್ಟರು, ನೀವು ಎಲ್ಲಿಂದ ಕಲಿತುಕೊಂಡಿರಿ ಎಂದು ಕೇಳಿದ ಅವರು, ಕುಮಾರಸ್ವಾಮಿಯವರಿಗೆ ಕೇವಲ ಒಂದು ಲೋಕವಲ್ಲ. ಅವರಿಗೆ ಎರಡು ಲೋಕವಿದೆ. ರಾಜಕೀಯ ಕ್ಷೇತ್ರದಲ್ಲಿ ನಮ್ಮೆಲ್ಲರಿಗೂ ಒಂದು ಲೋಕವಿದ್ದರೆ ನಿಮಗೆ ಎರಡೆರಡು ಕ್ಷೇತ್ರವಿದೆ. ನೀವು ಬಣ್ಣದ ಲೋಕದಿಂದ ಬಂದಂಥವರು. ಮುಖ್ಯಮಂತ್ರಿಯಾಗಿದ್ದಾಗ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ರಾಜಕಾರಣ ನಡೆಸಿದವರು ನೀವು ಎಂದರು. ಆರ್ ಎಸ್ ಎಸ್ ಬಗ್ಗೆ ತಮ್ಮ ಹುದ್ದೆಗೆ ಗೌರವ ತರದ ಹೇಳಿಕೆಗಳನ್ನು ಅವರು ಕೊಡುತ್ತಿದ್ದಾರೆ ಎಂದರು.
ಪ್ರಧಾನಿಗಳ ಬಗ್ಗೆ ಸಿದ್ದರಾಮಯ್ಯರವರು ಹಗುರವಾಗಿ ಮಾತನಾಡುವುದು, ಆರೆಸ್ಸೆಸ್ ಕುರಿತು ಕುಮಾರಸ್ವಾಮಿಯವರು ಹಗುರವಾದ ಹೇಳಿಕೆ ಕೊಡುವುದು ಸಲ್ಲ. ಇಂಥ ಹೇಳಿಕೆಗಳನ್ನು ಜನರು ಒಪ್ಪುವುದಿಲ್ಲ. ಇವೆರಡೂ ಪಕ್ಷಗಳನ್ನು ಸಿಂದಗಿ, ಹಾನಗಲ್‍ನ ಜನತೆ ತಿರಸ್ಕರಿಸಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು. ಅಲ್ಪಸಂಖ್ಯಾತರ ಮತಗಳಿಗಾಗಿ ಇವರಿಬ್ಬರು ಸ್ಪರ್ಧೆಯಿಂದ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು. ಕುಮಾರಸ್ವಾಮಿಯವರು ಆರ್ ಎಸ್ ಎಸ್ ಕುರಿತ ಹೇಳಿಕೆಯನ್ನು ಹಿಂದಕ್ಕೆ ಪಡೆದು ಆರೆಸ್ಸೆಸ್‍ನ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದರು.