ಅಹಮದಾಬಾದ್ : ಮಧ್ಯಪ್ರದೇಶ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ(ಬಿಜೆಪಿ) ಹಿರಿಯ ನಾಯಕ ಶಿವರಾಜ್ ಸಿಂಗ್ ಚೌಹಾನ್ ಶುಕ್ರವಾರ ದೆಹಲಿ ಸಿಎಂ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಗುಜರಾತ್‌ನ ಮಾಂಡವಿಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಚೌಹಾಣ್ ಅವರು ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ಗಾಂಧಿ ವಂಶಸ್ಥರ ವಿರುದ್ಧ ಹರಿಹಾಯ್ದರು.
ಕೇಜ್ರಿವಾಲ್ ಮುಳ್ಳಿನ ಮರ, ರಾಹುಲ್ ಗಾಂಧಿ ಕಳೇ ಗಿಡ ಮತ್ತು ಪ್ರಧಾನಿ ನರೇಂದ್ರ ಮೋದಿ ಕಲ್ಪವೃಕ್ಷ ಎಂದು ಬಣ್ಣಿಸಿದರು.
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಗುಜರಾತ್ ರಾಜ್ಯ ಮತ್ತು ಇಡೀ ದೇಶ ಸಂತೋಷವಾಗಿದೆ. ಮೋದಿಯವರು ‘ಕಲ್ಪವೃಕ್ಷ’ ವಿದ್ದಂತೆ ಅವರು ಬೇಕಾದುದನ್ನು ಕೊಡುತ್ತಾರೆ. ಕೇಜ್ರಿವಾಲ್ ಅವರು ಮುಳ್ಳಿನ ಮರ, ಅವರು ನಿಮಗೆ ಮುಳ್ಳುಗಳನ್ನು ಮಾತ್ರ ನೀಡುತ್ತಾರೆ. ರಾಹುಲ್ ಗಾಂಧಿ ಬೆಳೆ ನಾಶ ಮಾಡುವ ಕಳೆ ಗಿಡ ಇದ್ದಂತೆ ಎಂದು ಹೇಳಿದರು.
ಗುಜರಾತ್ ವಿಧಾನಸಭೆ ಚುನಾವಣೆ 2022 – ಎರಡು ಹಂತಗಳಲ್ಲಿ ನಡೆಯಲಿದೆ. 89 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 1 ರಂದು ಚುನಾವಣೆ ನಡೆಯಲಿದ್ದು, ಉಳಿದ 93 ಸ್ಥಾನಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ.
ಚುನಾವಣಾ ಆಯೋಗವು ಗುಜರಾತ್ ಚುನಾವಣಾ ಫಲಿತಾಂಶವನ್ನು ಡಿಸೆಂಬರ್ 8 ರಂದು ಪ್ರಕಟಿಸಲಿದೆ.