ಬೆಂಗಳೂರು: ಕಳೆದ ಎರಡು ವರ್ಷದಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಕೊರೊನಾ ಮಹಾಮಾರಿ ಭಾರೀ ಹೊಡೆತ ನೀಡಿತ್ತು. ಈ ವರ್ಷ ಮಕ್ಕಳು ಖುಷಿಯಲ್ಲಿ ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕೋಸ್ಕರ ಕಾಯುತ್ತಿದ್ದಾರೆ. ಫಲಿತಾಂಶದ ದಿನವನ್ನು ಸಚಿವ ನಾಗೇಶ್ ತಿಳಿಸಿದ್ದಾರೆ.
ಮೇ ಮೂರನೇ ವಾರ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಮೌಲ್ಯಮಾಪನ ಪ್ರಕ್ರಿಯೆ ಮುಗಿದಿದೆ. ಫಲಿತಾಂಶದ ತಯಾರಿ ಮಾಡಲಾಗುತ್ತಿದೆ. ಮೇ 3ನೇ ವಾರದಲ್ಲಿ ಫಲಿತಾಂಶ ಕೊಡಲಿದ್ದೇವೆ. ದಿನಾಂಕವನ್ನು ಆದಷ್ಟು ಬೇಗ ತಿಳಿಸುತ್ತೇವೆ ಎಂದು ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.
ಮಾರ್ಚ್ 28 ರಿಂದ ಏಪ್ರಿಲ್ 11ರ ತನಕ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು. ಈ ಬಾರಿ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ 15,387 ಶಾಲೆಗಳಿಂದ 8,73,884 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 4,52,732 ವಿದ್ಯಾರ್ಥಿಗಳು, 4,21,110 ವಿದ್ಯಾರ್ಥಿನಿಯರು ಮತ್ತು 4 ತೃತೀಯ ಲಿಂಗಿ ವಿದ್ಯಾರ್ಥಿಗಳು. ಅಲ್ಲದೆ ವಿಭಿನ್ನ ಸಾಮರ್ಥ್ಯವುಳ್ಳ 5,307 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.