ನೋಯ್ಡಾ: ಕನ್ವರ್ ಯಾತ್ರೆಯನ್ನು ಸಲೀಸಾಗಿ ನಡೆಯಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕನ್ವರ್ ಯಾತ್ರೆಯ ಮಾರ್ಗದಲ್ಲಿನ ಎಲ್ಲಾ ಅಕ್ರಮ ಮದ್ಯ ಮತ್ತು ಮಾಂಸದ ಅಂಗಡಿಗಳನ್ನು ಯಾತ್ರೆ ಮುಗಿಯುವವರೆಗೆ ಮುಚ್ಚುವಂತೆ ಮಂಗಳವಾರ ನಿರ್ದೇಶನ ನೀಡಿದೆ.
ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಗೌತಮ್ ಬುದ್ಧ ನಗರ ಆಡಳಿತವು ತನ್ನ ಇಲಾಖೆಗಳಿಗೆ ಕನ್ವರ್ ಯಾತ್ರಾ ಮಾರ್ಗದಲ್ಲಿ ಯಾವುದೇ ಅಕ್ರಮ ಮದ್ಯ ಅಥವಾ ಮಾಂಸದ ಅಂಗಡಿಗಳನ್ನು ತೆರೆಯದಂತೆ ಸೂಚನೆ ನೀಡಿದೆ. ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಡ್ರೋನ್‌ಗಳನ್ನು ಬಳಕೆ ಮಾಡಲಾಗುತ್ತಿದೆ ಎಂಬುದನ್ನು ಸೂಚಿಸಿದೆ.
ಜೊತೆಗೆ ಯಾತ್ರೆ ಸಾಗುವ ಮಾರ್ಗಗಳಲ್ಲಿ ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಹಾಸ್ ಎಲ್ ಯತಿರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಹಲವು ಅಂತರ-ಇಲಾಖೆಯ ಸಭೆಗಳ ಮೂಲಕ ಆಡಳಿತವು ರಸ್ತೆಗಳಲ್ಲಿ ನೀರು ನಿಲ್ಲದಂತೆ ಮತ್ತು ಉತ್ತಮ ಬೆಳಕು ಮತ್ತು ಗುಂಡಿಗಳಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದೆ.
ಗೌತಮ್ ಬುದ್ಧ ನಗರದಲ್ಲಿ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಮೂಲಕ ಯಾತ್ರೆಯನ್ನು ಜುಲೈ 15 ರಿಂದ 26 ರವರೆಗೆ ಮಂಗಳಕರ ಹಿಂದೂ ತಿಂಗಳ ಶ್ರಾವಣದಲ್ಲಿ ನಿಗದಿಪಡಿಸಲಾಗಿದೆ. “ಪ್ರತಿ ವರ್ಷದಂತೆ ಕನ್ವರ್ ಯಾತ್ರೆಯ ಸಿದ್ಧತೆಗಳ ಕುರಿತು ಉತ್ತರ ಪ್ರದೇಶ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ಯಾತ್ರೆಯ ಎಲ್ಲಾ ಮಾರ್ಗಗಳನ್ನು ಪರಿಶೀಲಿಸಲು ಮತ್ತು ಯಾವುದೇ ಅನಧಿಕೃತ ಮದ್ಯ ಅಥವಾ ಮಾಂಸದ ಅಂಗಡಿಗಳು ಈ ಮಾರ್ಗದಲ್ಲಿ ಕಾರ್ಯನಿರ್ವಹಿಸದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ, ಇದರಿಂದಾಗಿ ಯಾತ್ರೆಯ ಸಮಯದಲ್ಲಿ ಅನಗತ್ಯ ಜನಸಂದಣಿಯನ್ನು ತಪ್ಪಿಸಬಹುದು” ಎಂದು ಅಧಿಕಾರಿ ಹೇಳಿದರು.