ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಡಿ.29) : ಕೋವಿಡ್ ಪ್ರಕರಣಗಳು ವಿದೇಶದಲ್ಲಿ ಉಲ್ಬಣಗೊಂಡಿರುವ ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾ ಮಟ್ಟದ ಕೋವಿಡ್-19 ಪ್ರಸ್ತುತ ಸ್ಥಿತಿಗತಿ, ಮುಂಜಾಗೃತಾ ಕ್ರಮಗಳು ಮತ್ತು ವ್ಯಾಕ್ಸಿನೇಷನ್ ಬಗ್ಗೆ ವಿಡಿಯೋ ಕಾನ್ಪೆರೆನ್ಸ್ ಮೂಲಕ ಸಭೆ ಜರುಗಿತು.
ಕೋವಿಡ್ ನಿಯಮಗಳಾದ ಮಾಸ್ಕ್ ಹಾಕುವುದು, ಕೈ ಸ್ವಚ್ಛಗೊಳಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಮಾಡಲು ಸೂಚಿಸಿದರು.
ಹೊಸ ವರ್ಷದ ಸಂಭ್ರಮಾಚರಣೆಗೆ ಹೊಟೇಲ್, ಪಬ್, ಬಾರ್‍ಅಂಡ್‍ರೆಸ್ಟೋರೆಂಟ್ಸ್, ಕ್ಲಬ್ಸ್ ಮತ್ತುಇತರೆ ಒಳಾಂಗಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುವ ಸಭೆ ಸಮಾರಂಭಗಳಲ್ಲಿ ನಿಗಧಿತ ಸಂಖ್ಯೆಗಿಂತ ಹೆಚ್ಚು ಜನರನ್ನು ಸೇರಿಸಬಾರದೆಂದು ತಿಳಿಸಿದರು.
ಹೊಸ ವರ್ಷದ ಸಂಭ್ರಮಾಚರಣೆಗೆ ಒಳಾಂಗಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುವ ಸಭೆ ಸಮಾರಂಭಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಬಳಸುವುದು ಮತ್ತು ಬಂದವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲು ಸೂಚಿಸಿದ ಅವರು, ರೋಗಲಕ್ಷಣಗಳಾದ ಜ್ವರ, ಕೆಮ್ಮು, ಶೀತ ಇದ್ದಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಹೇಳಿದರು.
ಎಲ್ಲಾ ಸಿನಿಮಾಮಂದಿರಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿಸಲು ತಿಳಿಸಿದರು. ಜನಸಂದಣಿಯಾಗುವ ಪ್ರದೇಶಗಳನ್ನು ಆದಷ್ಟು ನಿಗಾ ವಹಿಸಿ ಜನರು ಗುಂಪು ಸೇರದಂತೆ ನೋಡಿಕೊಳ್ಳುವುದು ಹಾಗೂ ಜನರುಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಕೋವಿಡ್-19ರ ನಿಯಮಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಲು ತಿಳಿಸಿದರು.
ಆಸ್ಪತ್ರೆಯಲ್ಲಿ ಗುರುತಿಸ್ಪಡುವ ಎಲ್ಲಾ ILI, SARI ಪ್ರಕರಣಗಳಿಗೆ ಪರೀಕ್ಷೆ ಮಾಡುವುದು ಕಡ್ಡಾಯವಾಗಿರುತ್ತದೆ. ಜಿಲ್ಲೆಯ ಜಿಲ್ಲಾಆಸ್ಪತ್ರೆ, ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯಕೇಂದ್ರಗಳು, ಪ್ರಾಥಮಿಕ ಕೇಂದ್ರಗಳಲ್ಲಿ ಕೋವಿಡ್ ಟೆಸ್ಟಿಂಗ್ ಮಾಡಲು ತಾಕೀತು ಮಾಡಿದರು. ಪಾಸಿಟಿವ್ ಧೃಢಪಟ್ಟ ಎಲ್ಲಾ ಪ್ರಕರಣಗಳ ಮಾದರಿಗಳನ್ನು WGS ಗೆ ಕಳುಹಿಸಲು ತಿಳಿಸಿದರು.
ಕೋವಿಡ್ 19 ಪ್ರಕರಣಗಳ ನಿರ್ವಹಣೆಗಾಗಿ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಐಸೋಲೇಶನ್ ಬೆಡ್‍ಗಳನ್ನು ಮೀಸಲಿಡುವುದು. ಐ.ಸಿ.ಯು. ವೆಂಟಿಲೇಟರ್ಸ್, ಆಕ್ಸಿಜನ್ ಪೂರೈಕೆ, ಔಷಧಿ, ಐಸೋಲೆಷನ್ ಬೆಡ್ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ ಉಪಕರಣಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.
ಆಕ್ಸಿಜನ್ ಪೂರೈಕೆ ವ್ಯವಸ್ಥೆಯನ್ನು ಖಚಿತ ಪಡಿಸಿಕೊಳ್ಳಲು ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ಡ್ರೈರನ್ ಮಾಡುವುದು. ಆರೋಗ್ಯ ಸಂಸ್ಥೆಗಳಲ್ಲಿ ಎಲ್ಲಾ ವೈದ್ಯರು ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳು ಆರೈಕೆ ಮಾಡುವವರು ಮತ್ತು ಸಂದರ್ಶಕರು ಮಾಸ್ಕ್ ಕಡ್ಡಾಯವಾಗಿ ಧರಿಸಲು ತಿಳಿಸಿದರು.
ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಕ್ಕಳು ಮತ್ತು ಶಾಲಾ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಲು ಹಾಗೂ ಆರೋಗ್ಯ ಶಿಕ್ಷಣ ನೀಡಲು ಸೂಚಿಸಿದರು.
ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ್ ಲಭ್ಯವಿರುವ ಅನುದಾನದಡಿಯಲ್ಲಿ ಮಾಸ್ಕ್, ಸ್ಯಾನಿಸ್ಟೈರ್‍ಗಳನ್ನು ಖರೀದಿಸಿ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಆರೋಗ್ಯ ಸಿಬ್ಬಂದಿಗಳಿಗೆ ಹಾಗೂ ಪೌರಕಾರ್ಮಿಕರಿಗೆ ವಿತರಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ತೆಗೆದು ಕೊಂಡ ಕೋವಿಡ್ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ಕೋವಿಡ್-19 ಮುಂಜಾಗ್ರತಾ ಕ್ರಮದ ಕುರಿತು ಈಗಾಗಲೇ ಜಿಲ್ಲಾ ಮಟ್ಟದ ಸಭೆಯನ್ನು ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಎಲ್ಲಾ ಇಲಾಖೆಗಳಿಂದ ಸಹಕಾರ ಪಡೆದು ಮುಂಜಾಗ್ರತಾ ಕ್ರಮ ವಹಿಸುವ ಬಗ್ಗೆ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪ್ರಕರಣಗಳಿಗೆ ಕಡ್ಡಾಯವಾಗಿ ಮಾದರಿಗಳನ್ನು ಸಂಗ್ರಹಿಸಲು ತಿಳಿಸಿದರು.
ಕೋವಿಡ್-19 ಪಾಸಿಟಿವ್ ಧೃಡಪಟ್ಟ ಪ್ರಕರಣಗಳ ಮಾದರಿಯನ್ನು ಕಳುಹಿಸಲು ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.
ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಮಾಕ್‍ಡ್ರಿಲ್‍ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಪ್ರಿಕಾಷನರಿಡೋಸ್ ಜಿಲ್ಲೆಯಲ್ಲಿ ಪ್ರತಿಶತ 12 ಪ್ರಗತಿ ಸಾಧಿಸಿದ್ದು ಜನವರಿ-23ರ ಅಂತ್ಯದೊಳಗೆ ಪ್ರತಿಶತ 50 ಗುರಿ ಸಾಧಿಸಲು ಕ್ರಿಯಾಯೋಜನೆಯನ್ನು ರೂಪಿಸಲಾಗಿದ್ದು ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು ಮೈಕ್ರೋ ಪ್ಲಾನ್ ರಚಿಸಿ ಆದ್ಯತೆ ಮೇರೆಗೆ ಪ್ರಿಕಾಷನರಿಡೋಸ್ ನೀಡಲು ತಿಳಿಸಿದರು. ಜಿಲ್ಲೆಯಲ್ಲಿ ಮೊಬೈಲ್ ಟೀಮ್‍ಗಳನ್ನು ರಚಿಸಿಕೊಂಡು ಕೋವಿಡ್-19ರ ಮಾದರಿಗಳನ್ನು ಪ್ರತಿಶತ 80 ರಿಂದ 100 ಸಾಧಿಸಲು ಕ್ರಮ ವಹಿಸಲಾಗಿದೆಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ವೇದಾಂತ ಸಂಸ್ಥೆಯಿಂದ ಸರಬರಾಜಾಗಿದ್ದ ವೈದ್ಯೋಪಕರಣಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಸದುಪಯೋಗ ಪಡಿಸಿಕೊಳ್ಳುವಂತೆ, ಅವಶ್ಯಕತೆಗಿಂತ ಹೆಚ್ಚಿದ್ದಲ್ಲಿ ಜಿಲ್ಲೆಯ ಇತರೆ ತಾಲ್ಲೂಕು ಆಸ್ಪತ್ರೆಗಳಿಗೆ ಸರಬರಾಜು ಮಾಡಿಸಲು ತಿಳಿಸಿದರು.
ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಿದರು. ಎಲ್ಲಾ ಪೌರಕಾರ್ಮಿಕರು, ನಗರ ಸಭೆ ಸಿಬ್ಬಂದಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಮಾಸ್ಕ್‍ದರಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಮಾತನಾಡಿ, ಎಲ್ಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಪಿ.ಎಸ್.ಎ ಪ್ಲಾಂಟ್‍ಗಳ ಪ್ರಜರ್, ಪ್ಯೂರಿಟಿಟೆಸ್ಟ್ ಮಾಡಲು ತಿಳಿಸಿದರು.
ಹೊಳಲ್ಕೆರೆ ಮತ್ತು ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್‍ಗಳಲ್ಲಿ ಪ್ಯೂರಿಟಿಟೆಸ್ಟ್ 90% ಗಿಂತ ಕಡಿಮೆ ಇದ್ದು ತ್ವರಿತವಾಗಿ ದುರಸ್ಥಿ ಮಾಡಿಸಲು ತಿಳಿಸಿದರು. ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಮಾಕ್‍ಡ್ರಿಲ್ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 58 ವೆಂಟಿಲೇಟರ್‍ಗಳು ಲಭ್ಯವಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ 40 ಇತರೆ ಕಡೆ 18 ವೆಂಟಿಲೇಟರ್‍ಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಕಡ್ಡಾಯವಾಗಿ ಎಲ್ಲಾ ಆರೋಗ್ಯ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ವ್ಯಾಕ್ಸಿನ್ ಹಾಕಿಸಿಕೊಂಡಿರುವುದನ್ನು ದೃಢಪಡಿಸಿ ವ್ಯಾಕ್ಸಿನ್ ಪಡೆಯದೇ ಇದ್ದಲ್ಲಿ ವ್ಯಾಕ್ಸಿನ್ ಪಡೆಯಲು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸ ಹೆಚ್.ಜೆ.ಬಸವರಾಜಪ್ಪ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶೀಲ್ದಾರ್, ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆಗಳ ಆಡಳಿತ ವೈದ್ಯಾಧಿಕಾರಿಗಳು, ಮತ್ತು ಖಾಸಗಿ ಆಸ್ಪತ್ರೆಯ ಮುಖ್ಯಸ್ಥರು ಹಾಜರಿದ್ದರು.