ಚಿತ್ರದುರ್ಗ, (ನ.28): ಪೋಷಕರು ಮಕ್ಕಳಲ್ಲಿ ಬರಿ ಇಂಜಿನಿಯರ್, ಮೆಡಿಕಲ್ ಆಯ್ಕೆಗಳನ್ನು ಮಾತ್ರ ನೀಡದೆ, ಮಕ್ಕಳು ಯಾವ ಕ್ಷೇತ್ರವನ್ನ ಆಯ್ಕೆ ಮಾಡಿಕೊಳ್ಳುತ್ತಾರೋ ಅದಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ರಾಧಿಕಾ ಜಿ. ಹೇಳಿದರು.
ನಗರದ ಎಸ್ ಆರ್ ಎಸ್ ಪಿಯು ಕಾಲೇಜು ಸಭಾಂಗಣದಲ್ಲಿ, ನಡೆದ “ಸಾಧಕರೊಂದಿಗೆ ಸಂವಾದ”-2021 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ಬೇರೆ ಬೇರೆ ಸಡಗರ, ಸಂಭ್ರಮದ ಕಾರ್ಯಕ್ರಮಗಳನ್ನು ನೋಡಿದ್ದೇನೆ. ಆದರೆ ಇಂಥಹ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಪರೂಪ. ಹಾಗಾಗಿ ಈ ಸಂಸ್ಥೆಯ ಆಡಳಿತ ಮಂಡಳಿಯವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನೀಟ್, ಜೆಇಇ ಹಾಗೂ ಸಿಇಟಿ ಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್‍ಗಳಿಸಿದ ಕು. ಮೇಘನ್ ಹೆಚ್.ಕೆ., ಮಾತನಾಡಿ ವಿದ್ಯಾರ್ಥಿಗಳೆ, ನಮ್ಮ ಭಾರತದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಸ್ಪರ್ಧೆಯೂ ಸಹ ಹೆಚ್ಚಿದೆ. ಹಾಗಾಗಿ ನೀವು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು. ವಿಶ್ವದಲ್ಲಿ ಬೇರೆ ದೇಶಗಳಿಂತಲೂ ಹೆಚ್ಚು ಯುವ ಜನತೆಯನ್ನು ಭಾರತ ಹೊಂದಿದ್ದು ಈ ದೇಶದ ಪ್ರಗತಿಯು ಹೆಚ್ಚಾಗಬೇಕಿದೆ, ಆಗ ಮಾತ್ರ ಹೆಚ್ಚಾದ ಜನಸಂಖ್ಯೆ ಒಂದು ದೇಶಕ್ಕೆ ಮಾರಕವಾಗದೆ ಪೂರಕವಾಗುತ್ತದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಂಗಾಧರ್ ಈ. ಪದವಿ ಪೂರ್ವ ಶಿಕ್ಷಣ ಎನ್ನುವುದು ಎರಡು ವರ್ಷಗಳ ಅಧ್ಯಯನ ಎನ್ನುವುದಕ್ಕಿಂತ ಹದಿನೇಳು ತಿಂಗಳ ಅವಧಿಯ ಅಭ್ಯಾಸ ಎಂದರು. ಹಾಗಾಗಿ ಕಡಿಮೆ ಸಮಯದಲ್ಲಿ ನಿಮ್ಮ ಸ್ಪರ್ಧಾತ್ಮಕ ಜೀವನವನ್ನ ಹೇಗೆ ನೆಲೆಗೊಳಿಸಿಕೊಳ್ಳುವಿರಿ ಎಂಬ ಪ್ರಶ್ನೆ ನಿಮ್ಮ ಮುಂದಿದೆ, ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಬಿ. ಎ. ಲಿಂಗಾರೆಡ್ಡಿ ರವರು ಮಾತನಾಡಿ “ಸಾಧಕರೊಂದಿಗೆ ಸಂವಾದ” ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜಿಸುವ ಉದ್ದೇಶವೇನೆಂದರೆ ಪ್ರಸಕ್ತ ಸಾಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲೆಂಬ ಮಹದಾಸೆ. ರಾಜ್ಯಕ್ಕೆ ಕೀರ್ತಿ ತಂದಿರುವಂತಹ ಕು. ಮೇಘನ್ ಹೆಚ್.ಕೆ., ಅವರಿಂದ ಸ್ಫೂರ್ತಿದಾಯಕ ಮಾತುಗಳನ್ನಾಡಿಸಿದಾಗ ನಮ್ಮ ವಿದ್ಯಾರ್ಥಿಗಳು ಸಹ ಅವರ ಮಟ್ಟಕ್ಕೆ ಬೆಳೆಯಬಹುದು ಎಂಬುದು ನನ್ನ ಆಸೆ ಎಂದರು.
“ಸ್ಫೂರ್ತಿಯಿಂದ ಸ್ಫೂರ್ತಿಯೆಡೆಗೆ” ಎಂಬ ಶಿರ್ಷಿಕೆಯಡಿ ನಡೆದ “ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ 2020ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ 616 ಅಂಕಗಳಿದ ಗೌರಂಗ್ ಮಂಜುನಾಥ್ ಜಿ ಪಿ., ಜೆಇಇ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 566ನೇ ರ್ಯಾಂಕ್ ಪಡೆದ ಕು.ಅಭಿಷೇಕ್ ಪಿ. ಎಂ. 2021ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ 620 ಅಂಕಗಳಿದ ಕು. ಶ್ರೇಯಸ್ ಆರ್. ಜೆಇಇ ನಲ್ಲಿ 99.17 ಪರ್ನಟೈಲ್ ಗಳಿಸಿ ಲಕ್ನೋಗೆ ಆಯ್ಕೆಯಾದ ಕು. ಧೃವ ಎನ್ ಎಲ್ ಚೌಧರಿ, ವಾಣಿಜ್ಯ ವಿಭಾಗದಲ್ಲಿ 2021ರ ದ್ವಿತೀಯ ಪಿಯು ಪರೀಕ್ಷೆಯಲ್ಲಿ 600 ಕ್ಕೆ 600 ಅಂಕ ಪಡೆದ ಮಹಾಲಕ್ಷೀ ಸಾಹುಕಾರ್, ನೇಹ ಚೋಪ್ರ, ಬಿ.ಕಾಂ ವಿಭಾಗದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಗಳಿಸಿದ ಚೈತನ್ಯ ಸಿ.ಎಂ, ಸಾಕ್ಷಿನಿ ಎಸ್.ಎಸ್. ಇವರೆಲ್ಲರ ಜೊತೆಗೆ ಎಲ್ಲ ವಿಷಯಗಳಲ್ಲೂ 100 ಕ್ಕೆ 100 ಅಂಕಗಳನ್ನು ಪಡೆದಂತಹ ಅನೇಕ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ರವಿ ಟಿ. ಎಸ್. ಹಾಗೂ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.