ಸುದ್ದಿಒನ್, ಚಿತ್ರದುರ್ಗ, (ಅ.18) : ಮುರುಘಾ ಶರಣರ ಆಶಯದಂತೆ ಜಿಲ್ಲೆಯಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಇಂಡಸ್ಟ್ರೀಯಲ್ ಟೌನ್‌ಶಿಫ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮುರುಘಾ ಮಠದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಹಾಗೂ ಮುರುಘಾ ಶ್ರೀಗಳ ಪೀಠಾರೋಹಣದ ತೃತೀಯ ದಶಮಾನೋತ್ಸವ, ಗುರು ವಂದನೆ ಸಮಾರಂಭದಲ್ಲಿ ಬಸವ ಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಇಂಡಸ್ಟ್ರೀಯಲ್ ಟೌನ್‍ಶಿಪ್ ಮಾಡಲು ಸಿದ್ದನಿದ್ದೇನೆ. ಜಿಲ್ಲಾಧಿಕಾರಿಗಳು ಚಿತ್ರದುರ್ಗದಲ್ಲಿ 1 ಸಾವಿರದಿಂದ 2 ಸಾವಿರ ಎಕರೆ ಭೂಮಿಯನ್ನು ಗುರುತಿಸಿದರೆ ನಾನು ಈ ಕಾರ್ಯ ಮಾಡಲು ಸಿದ್ದನಿದ್ದೇನೆ.
ಸುವರ್ಣ ಕರ್ನಾಟಕ ಕಟ್ಟಬೇಕು ಎಂಬ ಸಂಕಲ್ಪ ಮಾಡಿದ್ದೇನೆ. ಸುಭೀಕ್ಷ, ಸುರಕ್ಷಿತ ಕರ್ನಾಟಕವನ್ನು, ಸಮಾನತೆಯ ದಿನಾಚರಣೆಯನ್ನು ಸರ್ಕಾರ ವತಿಯಿಂದ ಕಾರ್ಯಕ್ರಮ ಮಾಡುತ್ತೇನೆ ಎಂದು ತಿಳಿಸಿದರು. ಇದು ಕರಾರು ರಹಿತ ಪ್ರೀತಿ, ಭಕ್ತಿಯನ್ನು ಸಮರ್ಪಣಾ ಭಾವದಿಂದ ಮಾಡಬೇಕು. ವೈಚಾರಿಕ ಕ್ರಾಂತಿಯೇ ಶರಣ ಸಂಸ್ಕೃತಿ, ಮನುಷ್ಯರನ್ನು ಮನುಷ್ಯರಾಗಿ ನೋಡುವುದೇ ಶರಣ ಸಂಸ್ಕೃತಿ. 12ನೇ ಶತಮಾನದ ಪ್ರತಿಪಾದನೆಯನ್ನು ಶ್ರೀಗಳು ಮಾಡುತ್ತಿದ್ದಾರೆ. ಈಗ 21ನೇ ಶತಮಾನ, ಅಂಕಿಗಳು ತಿರುಗುಮುರುಗಾಗಿವೆ. ಮನುಕುಲದ ಅಭಿವೃದ್ದಿಯಾಗಬೇಕು. ಬಸವಣ್ಣ ಇಂದಿಗೂ ಪ್ರಸ್ತುತ. ಅಸಮಾನತೆ, ಲಿಂಗಬೇದ ಇಂದಿಗೂ ಇದೆ.
ಸಂಪೂರ್ಣವಾಗಿ ಇದನ್ನು ತೊಲಗಿಸುವ ಜವಾಬ್ದಾರಿ ಶರಣರಿಂದ ಪ್ರಾರಂಭವಾಗಿದೆ. ಇದನ್ನು ಎಲ್ಲರು ಮುಂದುವರಿಸಿಕೊಂಡು ಹೋಗುವುದು ಜನಸಾಮಾನ್ಯರ ಕರ್ತವ್ಯವಾಗಬೇಕು. ಮೌಢ್ಯಗಳು ತಮಗೆ ದುಃಖ ಉಂಟು ಮಾಡಿವೆ.. ಸಾಮಾಜಿಕ ಸಮಾನತೆ ಸಂತೋಷವನ್ನು ಉಂಟು ಮಾಡಿದೆ ಎಂದರು.
ಬಿ.ಎಸ್.ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಹೋರಾಟದ ಮನೋಭಾವ ಹೊಂದಿದ್ದರು. ಅಧಿಕಾರಕ್ಕೆ ಬಂದಾಗ ಅವುಗಳನ್ನು ಕಾರ್ಯರೂಪಕ್ಕೆ ತಂದರು. ಭದ್ರಾ ಮೇಲ್ದಂಡೆ ಯೋಜನೆಯನ್ನು ಆರಂಭಿಸಿ ಬರದ ನಾಡಾದ ಚಿತ್ರದುರ್ಗಕ್ಕೆ ನೀರಾವರಿ ಸೌಲಭ್ಯವನ್ನು ಹರಿಸಲು ನೆರವಾಗಿದ್ದಾರೆ. ಇದೊಂದು ಜನಪರ ಕೆಲಸ ಎಂದು ಹೇಳಿದರು.