ಬೆಂಗಳೂರು, (ನ.26): ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿನ ಬಾಬಾ ಸಾಹೇಬರ ಪುತ್ತಳಿಗೆ ವಿಶ್ವವಿದ್ಯಾಲಯದ ಆಡಳಿತ ವರ್ಗ, ಬೋಧಕ- ಬೋಧಕೇತರ ವರ್ಗ, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಮಾಲಾರ್ಪಣೆ ಮತ್ತು ಪುಷ್ಪನಮನ ಸಲ್ಲಿಸುವ ಮೂಲಕ ಸಂವಿಧಾನ ದಿನವನ್ನು ಇಂದಿಲ್ಲಿ ಆಚರಿಸಲಾಯಿತು.
“ಭಾರತ ಪ್ರಜಾಪ್ರಭುತ್ವದ ತಾಯಿ” ಎಂಬ ವಿಷಯದ ವಾಕ್ಯದೊಂದಿಗೆ ಸಂವಿಧಾನ ದಿನದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಎನ್. ಮಹೇಶ್ ಬಾಬುರವರು ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ವಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರವರು ಎರಡನೇ ಮಹಾಯುದ್ಧದ ಬಳಿಕ ವಸಾಹತು ಶಾಹಿ ವ್ಯವಸ್ಥೆ ಅಳಿದು, ನೂರಾರು ದೇಶಗಳು ಸ್ವತಂತ್ರ ಪಡೆದವು. ಇವುಗಳ ಪೈಕಿ ಹಲವು ದೇಶಗಳು ರಾಜಕೀಯ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ವಿಫಲವಾಗಿವೆ. ಭಾರತದ ನೆರೆಹೊರೆಯ ರಾಷ್ಟ್ರಗಳಾದ
ಬಾಂಗ್ಲಾದೇಶ, ಪಾಕಿಸ್ತಾನ,
ಮ್ಯಾನ್ಮಾರ್ ಇನ್ನಿತರ ದೇಶಗಳು ರಾಜಕೀಯ ಅಧಿಕಾರದಲ್ಲಿ ಸೋತ ದೇಶಗಳೆನಿಸಿವೆ ಆದರೆ, ಭಾರತ ಮಾತ್ರ ರಾಜಕೀಯ ಪ್ರಜಾಪ್ರಭುತ್ವದಲ್ಲಿ ಸೋತಿಲ್ಲ ಸೋಲುವುದು ಇಲ್ಲ. ಇದಕ್ಕೆ ಮೂಲ ಕಾರಣ ಭಾರತ ಸಂವಿಧಾನದ ಅತ್ಯಂತ ಗಟ್ಟಿಯಾದ ಚೌಕಟ್ಟೇ ಕಾರಣವಾಗಿದೆ. ಇದರ ಶ್ರೇಯ ಮಹನೀಯರಾದ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಸಲ್ಲಬೇಕು ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಎನ್. ಸಂಜೀವ್ ರಾಜ್, ಸಿಂಡಿಕೇಟ್ ಸದಸ್ಯರಾದ ಡಾ. ಎಚ್. ಸುಧಾಕರ್, ಪ್ರಾಧ್ಯಾಪಕರಾದ ಡಾ. ಸಿ. ಶಿವರಾಜು, ಡಾ. ಹೊನ್ನು ಸಿದ್ದಾರ್ಥ, ಡಾ.ಪಿ.ಸಿ. ಕೃಷ್ಣಸ್ವಾಮಿ, ಡಾ. ಕೆ. ಕೃಷ್ಣಮೂರ್ತಿ, ಡಾ.ಸಿ.ಡಿ.ವೆಂಕಟೇಶ್, ಡಾ.ಕೆ.ಜಿ. ಜಯರಾಮ ನಾಯ್ಕ್, ಡಾ. ಅಮರನಾಥ, ಡಾ. ಸಿ. ಸೋಮಶೇಖರ್, ವಿಶ್ವವಿದ್ಯಾಲಯದ ಅಭಿಯಂತರರಾದ ಬಿ.ಟಿ.ಚಂದ್ರಶೇಖರ್, ವಿಶ್ವವಿದ್ಯಾಲಯ ನೌಕರರ ಸಂಘದ ಅಧ್ಯಕ್ಷ ಪಿ. ಶಿವಪ್ಪ, ವಿವಿ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಬಿ. ದಿನೇಶ್, ಇತರರು ಉಪಸ್ಥಿತರಿದ್ದರು.