ಬೆಂಗಳೂರು: ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಪ್ತರೊಬ್ಬರ ಮನೆ ಸೇರಿದಂತೆ ಕಾಂಟ್ರಾಕ್ಟರ್ಸ್, ಉದ್ಯಮಿಗಳು ಮತ್ತು ಚಾರ್ಟೆಡ್ ಅಕೌಂಟೆಂಟ್ಸ್ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು.
ಇನ್ನೂ 300ಕ್ಕೂ ಅಧಿಕಾರಿಗಳ ತಂಡವು ಬೆಂಗಳೂರಿನ ವಿವಿಧೆಡೆ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದೆ. ತೆರಿಗೆ ವಂಚನೆ ಹಾಗೂ ತೆರಿಗೆ ವಂಚನೆಗೆ ಸಹಾಯ ಅರೋಪದ ಮೇಲೆ ಈ ದಾಳಿ ನಡೆದಿದೆ.
ರಾಮಕೃಷ್ಣ ಹೆಗಡೆ ನಗರ ಸೇರಿ ಬೆಂಗಳೂರಿನ 50ಕ್ಕೂ ಹೆಚ್ಚು ಕಡೆ ಕಾರ್ಯಾಚರಣೆ ನಡೆಸಿದ್ದು, ಬೆಳಗ್ಗೆ 5 ಗಂಟೆಯಿಂದಲೇ ದಾಖಲಾತಿಗಳ ಪರಿಶೋಧನೆ ಕೆಲಸ ನಡೆಯುತ್ತಿದೆ. ರಾಮಕೃಷ್ಣ ಹೆಗಡೆ ನಗರದ ನಿವಾಸಿ ನೀರಾವರಿ ಇಲಾಖೆಯ ಚಾರ್ಟೆಡ್ ಅಕೌಂಟೆಂಟ್ ಎನ್ನಲಾಗುತ್ತಿರುವ ಅಮಲಾ ಎಂಬುವರ ಮನೆ ಸೇರಿದಂತೆ ವಿವಿಧ ಕಡೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ
ಸಹಕಾರನಗರದ ರಾಹುಲ್ ಎಂಟರ್ ಪ್ರೈಸಸ್, ಸಿಮೆಂಟ್ ಮತ್ತು ಸ್ಟೀಲ್ ಡೀಲರ್ ಕಚೇರಿಗಳ ಮೇಲೆಯೂ ದಾಳಿ ನಡೆದಿದ್ದು, ಮೂರು ಕಾರುಗಳಲ್ಲಿ ಆಗಮಿಸಿರುವ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲಿಸುತ್ತಿದ್ದಾರೆ.
ಎಲ್ಲಾ ಸಿದ್ಧತೆಯೊಂದಿಗೆ ಏಕಕಾಲದಲ್ಲಿ ದಾಳಿ ನಡೆದಿದ್ದು, ಐಟಿ ಅಧಿಕಾರಿಗಳು 120 ಇನ್ನೋವಾ ಕ್ರಿಸ್ಟಾ ಕಾರುಗಳನ್ನು ಬುಕ್ ಮಾಡಿಕೊಂಡಿದ್ದರು. ಬಿ.ಎಸ್ಯಡಿಯೂರಪ್ಪ ಆಪ್ತ ಉಮೇಶ್ ಎಂಬುವರ ಮನೆ ಮೇಲೆ ಕೂಡ ದಾಳಿ ನಡೆದಿದೆ.
ರಾಜಾಜಿನಗರ ಬಾಷ್ಯಂ ಸರ್ಕಲ್ ಸಮೀಪದ ರಾಮಮಂದಿರ ಬಳಿ ಇರುವ ಉಮೇಶ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆ ಸೇರಿ ಉಮೇಶ್ಗೆ ಸಂಬಂಧಿತ 6 ಕಡೆಗಳಲ್ಲಿ ಐಟಿ ದಾಳಿ ನಡೆದಿದೆ.