ಕೋಟಿ ಕೋಟಿ ವಂಚನೆ ಪ್ರಕರಣದಲ್ಲಿ ಬಂಧನವಾಗಿರುವ ಚೈತ್ರಾ ಕುಂದಾಪುರ ಕೇಸ್ ಬಗೆದಷ್ಟು ಹೊಸ ಹೊಸ ವಿಚಾರಗಳು ತೆರೆದುಕೊಳ್ಳುತ್ತಿವೆ. ಇದೀಗ ಐಟಿ ಇಲಾಖೆಗೆ ಗೋವಿಂದ ಬಾಬು ಪೂಜಾರಿ ವಿರುದ್ಧವೇ ಚೈತ್ರಾ ಪತ್ರ ಬರೆದಿದ್ದರು ಎನ್ನಲಾಗಿದೆ. ಆ ಪತ್ರದಲ್ಲಿ ಸ್ವಾಮೀಜಿಯೊಬ್ಬರ ಹೆಸರನ್ನು ಉಲ್ಲೇಖ ಮಾಡಲಾಗಿತ್ತು ಎನ್ನಲಾಗಿದೆ.
ಐದು ಕೋಟಿ ನೀಡಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಐಟಿ ಇಲಾಖೆಗೆ ಚೈತ್ರಾ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ, ಉದ್ಯಮಿಯದ್ದು ಅವ್ಯವಹಾರ ಎಂದು ಬಿಂಬಿಸುವ ಯತ್ನ ನಡೆಸಿದ್ದಾರೆ. ಇನ್ನು ಈ ಪತ್ರದಲ್ಲಿ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೆಸರು ಉಲ್ಲೇಖವಾಗಿದೆ.
ಪತ್ರದಲ್ಲಿ ಸ್ವಾಮೀಜಿ ಹೆಸರು ಉಲ್ಲೇಕವಾದ ಹಿನ್ನೆಲೆ ಸ್ವಾಮೀಜಿ ಮಾತನಾಡಿದ್ದು, ನನಗೂ ಇದಕ್ಕೂ ಸಂಬಂಧವೇ ಇಲ್ಲ. ಆದರೆ ಎಲ್ಲೋ ಇರುವ ನನ್ನ ಹೆಸರನ್ನ ಯಾಕೆ ಪ್ರಸ್ತಾಪ ಮಾಡಿದರು ತಿಳಿಯುತ್ತಿಲ್ಲ. ಇದು ಗೊತ್ತಾದ ಕೂಡಲೇ ನಾನು ಒಬ್ಬರಿಗೆ ಕರೆ ಮಾಡಿದೆ. ಆಗ ಅವರು ಹೇಳಿದರು, ಇದು ನೀವಲ್ಲ ತುಮಕೂರಿನ ಅಭಿನವಹಾಲ ಸ್ವಾಮೀಜಿ ಅಂತೆ ಅಂದರು. ಬಳಿಕ ಅವರಿಗೆ ಕರೆ ಮಾಡಿದ್ದೆ, ನಾನು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ. ನೀವು ಎಚ್ಚರದಿಂದ ಇರಿ ಎಂದೇ ಅಭಿನವಹಾಲ ಸ್ವಾಮೀಜಿ ಹೇಳಿದ್ರು. ಬಳಿಕ ಚಕ್ರವರ್ತಿ ಸೂಲಿಬೆಲೆ ಅವರಿಗೂ ಕರೆ ಮಾಡಲಾಗಿತ್ತು. ನಾನು ಆ ಯುವತಿಗೆ ಎಚ್ಚರಿಕೆ ಕೂಡ ನೀಡಿದ್ದೆ. ಈ ವಿಚಾರವನ್ನು ಚರ್ಚೆ ಮಾಡುವುದಕ್ಕೆ ಹೋಗಿದ್ದಕ್ಕೆ ನನ್ನನ್ನು ತಗಲಾಕಿಸಿದ್ದಾರೆ ಎಂದಿದ್ದಾರೆ.