ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ನ.01): ಕನ್ನಡ ಕರುಳಿನ ಭಾಷೆಯ ಜೊತೆಗೆ ಅನ್ನದ ಭಾಷೆಯಾದಾಗ ಮಾತ್ರ ಕರ್ನಾಟಕದಲ್ಲಿ ಕನ್ನಡಿಗರು ಸ್ವಾಭಿಮಾನದಿಂದ ಬದುಕಬಹುದು ಎಂದು ಸಾಹಿತಿ ಡಾ.ಬಿ.ಎಲ್.ವೇಣು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಹತ್ತು ಬೆಳದಿಂಗಳ ವಿಶೇಷ ಕಾರ್ಯಕ್ರಮ ಹಾಗೂ 67 ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡುತ್ತ ಕರ್ನಾಟಕಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿರುವುದಕ್ಕೆ ಕನ್ನಡಿಗರೆಲ್ಲರೂ ಖುಷಿ ಪಡೆಬೇಕು. ಕನ್ನಡಕ್ಕೆ ಅಂತಹ ತಾಕತ್ತು, ಶಕ್ತಿಯಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಜ್ಞಾನ, ಅರಣ್ಯ, ಖನಿಜ, ಪ್ರಾಣಿ, ಪಕ್ಷಿಗಳ ಸಂಪತ್ತಿದೆ. ಆದರೂ ಕನ್ನಡಿಗರು ಪರಭಾಷಿಕರ ದೌರ್ಜನ್ಯದ ನಡುವೆ ಬದುಕುವಂತಾಗಿರುವುದರಿಂದ ಕನ್ನಡ ನಾಡಿನಲ್ಲಿಯೇ ಕನ್ನಡಿಗರನ್ನು ಹುಡುಕುವಂತ ಹೀನಾಯ ಪರಿಸ್ಥಿತಿ ಎದುರಾಗಿದೆ. ತಮಿಳು, ತೆಲುಗು, ಮರಾಠಿಗರ ಪುಂಡಾಟ ಜಾಸ್ತಿಯಾಗಿದೆ. ಇವೆಲ್ಲವನ್ನು ಸಹಿಸಿಕೊಂಡಿರುವ ಕನ್ನಡಿಗರು ನಿರಾಭಿಮಾನಿಗಳಾಗಿರುವುದು ನೋವಿನ ಸಂಗತಿ. ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರ್ಕಾರ ಕನ್ನಡಿಗರ ಮೇಲೆ ಹಿಂದಿ, ಇಂಗ್ಲಿಷ್ ಭಾಷೆಯನ್ನು ಹೇರುತ್ತಿದೆ. ಉದ್ಯೋಗ, ಶಿಕ್ಷಣಕ್ಕಾಗಿಯಾಗಿದರೂ ಕನ್ನಡಿಗರಿಗೆ ಕನ್ನಡ ಮೊದಲ ಆದ್ಯತೆಯಾಗಬೇಕು. ಕಾವೇರಿ, ಕೃಷ್ಣ ನದಿ ನೀರನ್ನು ಕುಡಿಯಲು ಬೇರೆಯವರ ಅಪ್ಪಣೆ ಪಡೆಯುವಂತಾಗಿದ್ದರು ಪ್ರತಿಭಟಿಸುವ ಹಕ್ಕನ್ನು ಕನ್ನಡಿಗರು ಕಳೆದುಕೊಂಡಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಕಾನ್ವೆಂಟ್‍ಗಳು ತಲೆ ಎತ್ತುತ್ತಿವೆ ಎಂದು ವಿಷಾದಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಸಿರುವ ಕೇಂದ್ರ ಸರ್ಕಾರ ಎಲ್ಲವನ್ನು ಖಾಸಗಿಕರಣಗೊಳಿಸಲು ಹೊರಟಿದೆ. ರೈಲ್ವೆ, ಅಂಚೆ ಕಚೇರಿ, ಬ್ಯಾಂಕ್‍ಗಳಲ್ಲಿ ಕನ್ನಡ ಮಾತನಾಡುವವರೆ ಕಮ್ಮಿ. ಟಿ.ವಿ. ಮೊಬೈಲ್‍ನಿಂದ ಇಂದಿನ ಮಕ್ಕಳು ಬಾಂಧ್ಯವವನ್ನೇ ಕಳೆದುಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಒಂದೊಂದು ತಾಲ್ಲೂಕಿನಲ್ಲಿಯೂ ತನ್ನದೆ ಆದ ಇತಿಹಾಸವಿದೆ. ಇವುಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಆಳುವ ಸರ್ಕಾರಗಳು ಕನ್ನಡದಲ್ಲಿ ಓದಿದವರಿಗೆ ಮಾತ್ರ ಕೆಲಸ ಎನ್ನುವ ಕಾನೂನು ಜಾರಿಗೆ ತರಲಿ. ಆಗ ಕನ್ನಡಕ್ಕೆ ಮಾನ್ಯತೆ ಸಿಕ್ಕಂತಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನು ಕನ್ನಡ ಉಳಿದುಕೊಂಡಿದೆ. ನವೆಂಬರ್ ಕನ್ನಡಿಗರಾಗುವ ಬದಲು ವರ್ಷವಿಡಿ ಕನ್ನಡ ಹಬ್ಬ ಆಚರಿಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸೋಣ ಎಂದು ಹೇಳಿದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶಿವಕುಮಾರ್ ಹೆಚ್.ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ ಡಯಟ್ ಉಪನ್ಯಾಸಕ ಪ್ರಶಾಂತ್‍ಕುಮಾರ್ ವೇದಿಕೆಯಲ್ಲಿದ್ದರು.