ಸುದ್ದಿಒನ್, ಚಿತ್ರದುರ್ಗ, (ಅ.06) : ಗಾಂಧೀಜಿಯ ಅದರ್ಶಗಳು ಇಡೀ ವಿಶ್ವಕ್ಕೆ ಮಾದರಿ, ಗಾಂಧಿ ಜಯಂತಿ ಅಚರಣೆ ಮಾಡಿದರೆ ಸಾಲದು ಅವರ ಅದರ್ಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಗ ಮಾತ್ರ ಇಂತ್ತಹ ಕಾರ್ಯಕ್ರಮಗಳಿಗೆ ಅರ್ಥ ಬರುತ್ತೆ ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಧ್ಯಾಪಕ ಡಾ.ಜೆ. ಕರಿಯಪ್ಪ ಮಾಳಿಗೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ 152ನೇ ಗಾಂಧಿ ಜಯಂತಿ ಅಂಗವಾಗಿ ನಡೆದ ಗಾಂಧಿ ಸ್ಮೃತಿ ಹಾಗೂ ಮದ್ಯ ಮುಕ್ತ ಸಾಧಕರ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಗಮಿಸಿ ಮಾತನಾಡಿದರು.
“ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕನಸಾದ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ, ಮಹಿಳಾ ಸ್ವಾವಲಂಬನೆ, ವ್ಯಸನ ಮುಕ್ತ ಸಮಾಜ ನಿರ್ಮಾಣ ಯೋಜನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಚಿತ್ರದುರ್ಗ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಕಾರಗೊಳಿಸುತ್ತಿದೆ. ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ರಾಷ್ಟ್ರದ ಅಭಿವೃದ್ಧಿ ಎಂದು ಗಾಂಧೀಜಿ ಹೇಳಿದ್ದರು. ಈ ಎಲ್ಲವುಗಳನ್ನು ಅಳವಡಿಸಿಕೊಂಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜ ಸುಧಾರಣೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಇದರ ಫಲವಾಗಿ ಗ್ರಾಮೀಣ ಪ್ರದೇಶದಲ್ಲಿ ಜನರು ವ್ಯಸನ ಮುಕ್ತರಾಗುತ್ತಿದ್ದಾರೆ. ಆದುದರಿಂದ ನಾವೆಲ್ಲರೂ ವ್ಯಸನ ಮುಕ್ತರಾಗಿ, ಆದರ್ಶರಾಗಿ ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ. ಮನ ಪರಿವರ್ತನೆಯಿಂದ ಮಾತ್ರ ದುಶ್ಚಟದಿಂದ ದೂರವಿರಲು ಸಾಧ್ಯ” ಎಂದು ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಗಾಂಧಿಯ ತತ್ವಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡ ಮಹಾನ್ ವ್ಯಕ್ತಿ ಎಂದು ಹೇಳಿದರು.
ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ, ಮದ್ಯ ವ್ಯಸನದಿಂದ ಜೀವ ಮತ್ತು ಜೀವನ ಹಾಳಾಗುವದರ ಜೊತೆಗೆ ಕುಟುಂಬಗಳು ಬೀದಿ ಪಾಲಾಗಿ, ಸಮಾಜದಲ್ಲಿ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ. ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿ ಇಲ್ಲದಿದ್ದರೂ ಅದರ ನಡುವಿನ ಬದುಕು ಮಾತ್ರ ನಮ್ಮ ಕೈಯಲ್ಲಿದೆ ಎಂದರು.
ಮದ್ಯವ್ಯಸನಿಗಳಾಗಿ ಜೀವನ ಅಂತ್ಯಗೊಳಿಸುವ ಬದಲು ಪ್ರತಿಯೊಬ್ಬರು ವ್ಯಸನ ಮುಕ್ತರಾಗಿ ಕುಟುಂಬದೊಂದಿಗೆ ಸಂತೋಷದ ಜೀವನ ನಡೆಸಲಿ ಎಂಬ ಉದ್ದೇಶದಿಂದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನಾಲ್ಕು ದಶಕದ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ಬಡತನದ ಬಗ್ಗೆ ಅಧ್ಯಯನ ನಡೆಸಿ, ಆ ಭಾಗದ ಅಭಿವೃದ್ಧಿ ಸುಧಾರಣೆ ಸಲುವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾದ ನಂತರ, ಮಧ್ಯ ಕರ್ನಾಟಕಕ್ಕೆ ಜನಜಾಗೃತಿ ಕಾರ್ಯಕ್ರಮವನನ್ನು ವಿಸ್ತರಿಸಿ, ಇಂದು ಸಾವಿರಾರು ಜನರ ಬಾಳಿಗೆ ಬೆಳಕಾಗಿದ್ದಾರೆ. ಆದ್ದರಿಂದ ಜನಜಾಗೃತಿ ಕಾರ್ಯಕ್ರದಲ್ಲಿ ಎಲ್ಲರೂ ಕೈಜೋಡಿಸಿ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕಾಗಿದೆ.” ಎಂದು ನುಡಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಎಸ್.ಮಾರುತೇಶ್, ಯೋಜನಾಧಿಕಾರಿ ನಾಗೇಶ್, ಜನಜಾಗೃತಿ ವೇದಿಕೆ ಸದಸ್ಯ ನಾಗರಾಜ್ ಸಂಗಮ್ ಮಾತನಾಡಿದರು. ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷರಾದ ಜೆ.ಬಿ ತಿರ್ಥಪ್ಪ, ಸಂಸ್ಕಾರ ಭಾರತಿ ಸಂಸ್ಥೆಯ ಕಾರ್ಯದರ್ಶಿ ಕೀರಣ್ ಶಂಕರ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ನಾಗರಾಜ್ ಸಂಗಮ್, ರೂಪ ಜನಾರ್ದನ್, ಕೆ.ಅರ್ ಮಂಜುನಾಥ್, ರಾಜು ನಾಯ್ಕ್, ಜನಜಾಗೃತಿ ವೇದಿಕೆಯ ಚಿತ್ರದುರ್ಗ, ಸಿರಿಗೆರೆ ತಾಲೂಕಿನ ಯೋಜನಾಧಿಕಾರಿಗಳಾದ ಯಶೋಧ ಶೆಟ್ಟಿ ಹಾಗೂ ಪ್ರವೀಣ್ ಎ.ಜಿ ಉಪಸ್ಥಿತರಿದ್ದರು.