ಚೈತ್ರಾ ಹೆಸರು ಎಲ್ಲರೂ ಕೇಳಿಯೇ ಇರುತ್ತೀರಿ. ಒಳ್ಳೆಯ ವಾಗ್ಮೀಯಾಗಿ ಗುರುತಿಸಿಕೊಂಡವರು. ಹಿಂದುತ್ವದ ಬಗ್ಗೆ ಹೆಚ್ಚು ಭಾಷಣ ಮಾಡಿದ್ದವರು. ಬಿಜೆಪಿ ನಾಯಕರ ಜೊತೆಗೆ ಗುರುತಿಸಿಕೊಂಡಿದ್ದವರು. ಆ ಬಳಿಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು 7 ಕೋಟಿ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಜೈಲಿಗೆ ಹೋಗಿ ಬಂದವರು. ಇದೀಗ ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಾರೆ.
ಇಂದಿನಿಂದ ಬಿಗ್ ಬಾಸ್ ಕನ್ನಡ ಸೀಸನ್ 11ಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಚೈತ್ರಾ ಕೂಡ ಬಿಗ್ ಬಾಸ್ ಮನೆಗೆ ಆಯ್ಕೆಯಾಗಿದ್ದಾರೆ. ಅದಕ್ಕೂ ಮುನ್ನ ಕಲರ್ಸ್ ಕನ್ನಡ ಪ್ರೋಮೋ ಒಂದನ್ನು ಮಾಡಿಕೊಂಡಿದೆ. ಇಂದು ಕಲರ್ಸ್ ಕನ್ನಡದ ಸೋಷಿಯಲ್ ಮೀಡಿಯಾದಲ್ಲಿ ಆ ಪ್ರೋಮೋ ಬಿಟ್ಟಿದ್ದು, ಚೈತ್ರಾ, ತನ್ನ ಜೈಲುವಾಸದ ದಿನಗಳ ಬಗ್ಗೆ ಮಾತನಾಡಿದ್ದಾರೆ.
ನಾನು ಕೂಡ ನೋಡುವಷ್ಟು ನೋಡಿದ್ದೇನೆ. ಸಹಿಸುವಷ್ಟು ಸಹಿಸಿದ್ದೇವೆ. ಇದು ನಿನಗೆ ಕೊನೆಯ ಎಚ್ಚರಿಕೆ. ನಾನು ಸಾಮಾನ್ಯ ಹಾಲು ಮಾರುವವನ ಮಗಳು. ಹಿಂದುತ್ವ ನನ್ನ ರಕ್ತದಲ್ಲಿಯೇ ಇದೆ. ನನ್ನನ್ನು ಗಟ್ಟಿ ಮಾಡಿರುವುದೇ ವಿರೋಧಿಗಳು. ನಾನು ಅರೆಸ್ಟ್ ಆಗಿದ್ದಾಗ ನನ್ನನ್ನು ನೋಡಲು ಉತ್ತರ ಕರ್ನಾಟಕದಿಂದ ಜನ ಬಂದಿದ್ದರು. ಅವರಿಗೆಲ್ಲಾ ನಾನು ಚಿರೃಣಿ. ಕೋರ್ಟ್, ಕೇಸ್ ಎಲ್ಲವನ್ನು ಎದುರಿಸುತ್ತಿದ್ದೇನೆ. ಇವೆಲ್ಲವೂ ನನ್ನನ್ನು ಕುಗ್ಗಿಸುವುದಿಲ್ಲ. ನಾನು ಜೈಲಿನಿಂದ ಹೊರ ಬಂದಾಗಲೇ ಬಿಗ್ ಬಾಸ್ ಬಗ್ಗೆ ಕೇಳಿದ್ದೆ. ನನಗೆ ಬಿಗ್ ಬಾಸ್ ಟೀಂನಿಂದ ಕಾಲ್ ಬಂದಾಗ ಗೊಂದಲದಲ್ಲಿದ್ದೆ. ಬಳಿಕ ಅವರು ಒಪ್ಪಿಸಿದ್ದು ಖುಷಿಯಾಯ್ತು ಎಂದು ತಿಳಿಸಿದ್ದಾರೆ.