ಸುದ್ದಿಒನ್, ಚಿತ್ರದುರ್ಗ, (ಅ.08) : ಹಿರಿಯೂರು ತಾಲೂಕಿಗೆ ಮಾಜಿ ಶಾಸಕರು ಶಾಪವಾಗಿದ್ದಾರೆ ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಧರ್ಮಪುರ ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀರಿನ ಹಂಚಿಕೆ ವಿಚಾರದಲ್ಲಿ ಹಿಂದಿನ ಶಾಸಕರಾಗಿದ್ದ ಮಾಜಿ ಸಚಿವ ಡಿ.ಸುಧಾಕರ್ ಅವರು ಮಾತನಾಡದೇ ಮೌನವಹಿಸಿದ್ದರಿಂದ ಸಮಸ್ಯೆಗಳು ಉದ್ಭವಾದವು. ಬಿಜೆಪಿ ಸರ್ಕಾರ ಭದ್ರಾದಿಂದ ವಿವಿ ಸಾಗರ ಜಲಾಶಯಕ್ಕೆ ೫ ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು. ನಂತರ ಬಂದ ಕಾಂಗ್ರೆಸ್ ಸರ್ಕಾರ ಹಂಚಿಕೆಯಾದ ೫ ಟಿಎಂಸಿ ನೀರಲ್ಲಿ ೩ ಟಿಎಂಸಿ ನೀರು ಕಡಿತಗೊಳಿಸಿ, ೨ ಟಿಎಂಸಿಗೆ ಇಳಿಸಿತ್ತು ಎಂದು ತಿಳಿಸಿದರು.
ಆ ಸಂದರ್ಭದಲ್ಲಿ ಶಾಸಕರಾಗಿದ್ದ ಡಿ. ಸುಧಾಕರ್ ಅವರು ಮನುಷ್ಯನ ಬದುಕಿಗೆ ಬೇಕಾಗುವ ೩ ಟಿಎಂಸಿ ನೀರನ್ನು ಬೇರೆಡೆಗೆ ತೆಗೆದುಕೊಂಡು ಹೋಗುವಾಗ ಸುಮ್ಮನಿದ್ದರು. ಇದೇ ತಾಲೂಕಿಗೆ ಶಾಪವಾಗಿದೆ ಎಂದರು.
ತಾಲ್ಲೂಕಿನ ಧರ್ಮಪುರ ಕೆರೆಗೆ ನೀರು ಹರಿಸಲು ನೂರಾರು ವರ್ಷಗಳ ಹೋರಾಟ ನಡೆಸಿಕೊಂಡು ಬಂದಿದ್ದರು. ನಾನು ಚುನಾವಣೆ ಸಂದರ್ಭದಲ್ಲಿ ಧರ್ಮಪುರ ಕೆರೆಗೆ ನೀರು ಹರಿಸುತ್ತೇನೆ ಎಂದು ಮಾತು ಕೊಟ್ಟಿದ್ದೆ, ಅದರಂತೆ ನವೆಂಬರ್ ತಿಂಗಳಲ್ಲಿ ಟೆಂಡರ್ ಕರೆಯಲಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಳೆದ ಬಾರಿ ಇದ್ದ ಶಾಸಕರು ತುಮಕೂರು ಬ್ರಾಂಚ್ ನ ಕಾಮಗಾರಿಯಲ್ಲಿ ೪೧ ನೇ ಕೆರೆಯನ್ನಾಗಿ ಧರ್ಮಪುರ ಕೆರೆಯನ್ನು ಸೇರಿಸಿದ್ದರು. ಅದು ಕಷ್ಟ ಸಾಧ್ಯವಾದಷ್ಟು ರಿಂದ ನಾನು ಯೋಜನೆ ತಯಾರಿಸಿ ಈ ಕಾಮಗಾರಿಗೆ ಅನುಮೋದನೆ ತಂದಿದ್ದೇನೆ ಎಂದರು.
ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಪಕ್ಕದ ಶಿರಾ ತಾಲೂಕಿಗೂ ಅನ್ವಯಿಸುವುದರಿಂದ, ಶಿರಾ ಶಾಸಕ ಡಾ. ರಾಜೇಶ್ ಗೌಡ ಮತ್ತು ನಾನು ವಿವಿ ಸಾಗರದಿಂದ ಗಾಯಿತ್ರಿ ಜಲಾಶಯಕ್ಕೆ ನೀರು ಹರಿಸಲು ಸದನದಲ್ಲಿ ಮಾತುಕತೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವೇ ಎಂದರು. ಗಾಯಿತ್ರಿ ಜಲಾಶಯಕ್ಕೆ ನೀರು ಹರಿಸುವ ಮೂಲಕ ಆ ಭಾಗದ ಜನರ ಆಸೆಯನ್ನು ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್, ಜಿಪಂ ಮಾಜಿ ಸದಸ್ಯೆ ರಾಜೇಶ್ವರಿ, ನಗರಸಭಾ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್, ತಾಪಂ ಮಾಜಿ ಸದಸ್ಯ ಯಶವಂತ್, ಕೇಶವಮೂರ್ತಿ, ಮಂಜುಳಾ, ನಗರಸಭಾ ಸದಸ್ಯರಾದ ಎಂ.ಡಿ. ಸಣ್ಣಪ್ಪ, ಪಲ್ಲವ, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.