ಸುದ್ದಿಒನ್ ವೆಬ್ ಡೆಸ್ಕ್
ನವದೆಹಲಿ : 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಜೈಲಿನಿಂದಲೇ ಅಕ್ರಮ ಎಸಗಿರುವುದು ಗೊತ್ತೇ ಇದೆ.
ಜೈಲಿನಲ್ಲಿ ಸಕಲ ಸೌಲಭ್ಯ ಕಲ್ಪಿಸಲು 80 ಕ್ಕೂ ಹೆಚ್ಚು ಅಧಿಕಾರಿಗಳಿಗೆ ಲಕ್ಷ ಲಕ್ಷ ಹಣ ನೀಡಿದ್ದಾರೆ. ಸುಕೇಶ್ ಅವರಿಂದ ಲಂಚ ಪಡೆದ ಅಧಿಕಾರಿಗಳು ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ಸುಕೇಶ್ ಚಂದ್ರಶೇಖರ್ ಅವರು ಭಾರೀ ಆರೋಪ ಮಾಡಿದ್ದರು. ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಜೈಲಿನಲ್ಲಿ ಸುರಕ್ಷಿತವಾಗಿರಲು 10 ಕೋಟಿ ರೂ. ಮತ್ತು ಆಮ್ ಆದ್ಮಿ ಪಕ್ಷಕ್ಕೆ ಕೋಟ್ಯಂತರ ರೂಪಾಯಿ ದೇಣಿಗೆ ನೀಡಿರುವುದಾಗಿ ಹೇಳಿರುವುದು ಸದ್ಯಕ್ಕೆ ಬಾರೀ ಸಂಚಲನ ಮೂಡಿಸಿದೆ.
ಆಮ್ ಆದ್ಮಿ ಪಕ್ಷಕ್ಕೆ ದೇಣಿಗೆ ನೀಡಿರುವುದಾಗಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಸುಕೇಶ್ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷಕ್ಕೆ ಕೋಟ್ಯಂತರ ರೂಪಾಯಿ ನೀಡಿದ್ದಾರೆ ಎಂಬ ಸುಕೇಶ್ ಚಂದ್ರಶೇಖರ್ ಆರೋಪವನ್ನು ತಳ್ಳಿಹಾಕಿದ್ದಾರೆ. ಅವು ಸುಳ್ಳು ಆರೋಪಗಳು ಮತ್ತು ಗುಜರಾತ್ ಚುನಾವಣೆ ಮತ್ತು ಮೋರ್ಬಿ ಸೇತುವೆ ದುರಂತದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಪಿತೂರಿ ಎಂದು ಅವರು ಆರೋಪಿಸಿದ್ದಾರೆ.
ಎಲ್ಲವೂ ಕಾಲ್ಪನಿಕ. ಮೋರ್ಬಿ ಘಟನೆಯಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನಗಳು. ಗುಜರಾತ್ ಚುನಾವಣೆ ಸಮೀಪಿಸುತ್ತಿದ್ದಂತೆ ಭಯಗೊಂಡಿದ್ದಾರೆ. ಎಎಪಿಯಿಂದಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದಲೇ ಆರ್ಥಿಕ ಅಪರಾಧಿಯನ್ನು ಬಳಸಿಕೊಂಡು ಸತ್ಯೇಂದ್ರ ಜೈನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.