ಬೆಂಗಳೂರು: ಪರಿಶಿಷ್ಟ ವರ್ಗಗಳಿಗೆ ಪ್ರತ್ಯೇಕ ಸಚಿವಾಲಯ ಆಗಬೇಕೆಂಬ ದೊಡ್ಡ ಬೇಡಿಕೆ ಸಮುದಾಯದವರಿಂದ ಇತ್ತು. ಇದಾದ ಬಳಿಕ ಮೊದಲ ಬಾರಿಗೆ ನಾಯಕನಾಗಿ ಆಯ್ಕೆಯಾಗಿದ್ದು, ಹೆಮ್ಮೆ ತಂದಿದೆ. ಪ್ರತ್ಯೇಕ ಸಚಿವಾಲಯದ ಬೇಡಿಕೆ ಈಡೇರಿರುವುದು ಸಂತಸ ತಂದಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ವಿಧಾನಸೌಧದಲ್ಲಿ ಇಂದು ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನ ಆರೋಜಿಸಿದ್ದು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಹರ್ಷಿ ವಾಲ್ಮೀಕಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ದೇಶದ ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭ ಅಟಲ್ ಬಿಹಾರಿ ವಾಜಪೇಯಿ ಅವರು ಪರಿಶಿಷ್ಟ ವರ್ಗಗಳಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದರು. ಇದೀಗ ರಾಜ್ಯದಲ್ಲಿ ಇಂಥದೊಂದು ಮಹತ್ವದ ಕಾರ್ಯವಾಗಿದೆ. ಈ ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿಗಳಿಗೆ ಅಭಿನಂದಿಸುತ್ತೇನೆ ಎಂದರು.
ಬುಡಕಟ್ಟು ಸಮುದಾಯದವರಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗಬೇಕು ಎಂಬ ಉದ್ದೇಶದಿಂದ ಆನ್ಲೈನ್ ವೇದಿಕೆಗಳ ಮೂಲಕ ವ್ಯಾಪಾರ, ವಹಿವಾಟು ನಡೆಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಸಮುದಾಯದಲ್ಲಿ ಇದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸಹ ನಾವು ಗೌರವಿಸಿದ್ದೇವೆ.ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿ ಎಸ್ ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತಿಯನ್ನು ಆರಂಭಿಸಿದ್ದರು.
ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಮುಖ್ಯಮಂತ್ರಿಗಳ ಸಹಕಾರ ಸಿಗಲಿದೆ. ಯಾವುದೇ ಸಮಸ್ಯೆ ಆಗದ ರೀತಿ ನೋಡಿಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ.ಬಜೆಟ್ನಲ್ಲಿ ಸಹ ನಮಗೆ ಉತ್ತಮ ಅನುದಾನ ಲಭಿಸಿದೆ. ಸಮುದಾಯಕ್ಕೆ ಎಲ್ಲಾ ರೀತಿಯ ಸಹಕಾರ ಒದಗಿಸುವ ಕಾರ್ಯವನ್ನು ಈ ಸರ್ಕಾರ ಮಾಡಲಿದೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.