ಚಿತ್ರದುರ್ಗ : ಅಡಕೆ ಕಳ್ಳತನ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳಲ್ಕೆರೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ಆತನಿಂದ 40,30,000/- ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಘಟನೆ ಹಿನ್ನೆಲೆ : ಬೆಂಗಳೂರು ಮೂಲದ ವಸಂತಕುಮಾರ ಎಂಬುವವನು ಸಾಗರದಿಂದ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಅಡಿಕೆ ಚೀಲಗಳನ್ನು ದಿನಾಂಕ:08.05.2022 ರಂದು ಹುಬ್ಬಳ್ಳಿ ಸಮೀಪ ಬೇರೆ ಎರಡು ಲಾರಿಗಳಲ್ಲಿ ಡಂಪ್ ಮಾಡಿಕೊಂಡು ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಗ್ರಾಮದ ಪಕ್ಕದಲ್ಲಿರುವ ಬೊಮ್ಮೇನಹಳ್ಳಿ ಗ್ರಾಮಕ್ಕೆ ಬಂದು, ದಿನಾಂಕ :09.05.2022 ರಂದು ಬೇರೆ 348 ಖಾಲಿ ಚೀಲಗಳಲ್ಲಿ ತುಂಬಿಸಿ, ಅದರಲ್ಲಿ 68 ಚೀಲ ಅಡಿಕೆಗಳನ್ನು
ಬಿ.ಟಿ.ವಿ ಸುಫಾರಿ ಟ್ರೇಡರ್ಸ್ ನಲ್ಲಿ ನಾಗರಾಜ ಎಂಬುವವರಿಗೆ ಮೋಸದಿಂದ ಮಾರಾಟ ಮಾಡಿ ಅವರಿಂದ
21,24,360 ರೂಪಾಯಿಗಳನ್ನು ಉಳಿದ 280 ಚೀಲ ಅಡಿಕೆಯನ್ನು ಭೀಮಸಮುದ್ರದ ಅಡಿಕೆ ವ್ಯಾಪಾರಿಯಾದ
ರಾಜು ಎಂಬುವರಿಗೆ ಮಾರಾಟ ಮಾಡಿ ಅವರಿಂದ 89,82,990/- ರೂ ಹಣವನ್ನು ಪಡೆದು ವಂಚಿಸಿ ಮೋಸ ಮಾಡಿರುತ್ತಾನೆ.
ಈ ಸಂಬಂಧ ರಾಜುರವರು ವಸಂತನ ವಿರುದ್ದ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಲು ಮಾನ್ಯ ಪೊಲೀಸ್ ಅಧೀಕ್ಷಕರಾದ ಕೆ.ಪರುಶುರಾಮ್, ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ
ಕುಮಾರಸ್ವಾಮಿ ಹಾಗೂ ಚಿತ್ರದುರ್ಗ ಉಪ ವಿಭಾಗದ ಪ್ರಭಾರ ಪೊಲೀಸ್ ಉಪಾಧೀಕ್ಷಕರವರಾದ ರೋಷನ್ ಜಮೀರ್ರವರ ಮಾರ್ಗದರ್ಶನದಲ್ಲಿ ಕೆ.ಎನ್.ರವೀಶ್ ಸಿ.ಪಿ.ಐ ಹೊಳಲ್ಕೆರೆ ವೃತ್ತ, ಹಾಗೂ ಹೊಳಲ್ಕೆರೆ ವೃತ್ತದ ಸಿಬ್ಬಂಧಿಗಳಾದ ಎ.ಎಸ್.ಐ ನಾಗರಾಜ್, ಕೆ.ಜೆ.ಲೋಕೇಶ್, ಎನ್.ತಿಮ್ಮಣ್ಣ, ರುದ್ರೇಶ,
ರಮೇಶ ಮತ್ತು ಕುಮಾರಸ್ವಾಮಿ ಇವರನ್ನೊಳಗೊಂಡ ತಂಡವನ್ನು ರಚಿಸಿದ್ದು, ದಿನಾಂಕ:14.07.2022 ರಂದು ಆರೋಪಿ ವಸಂತಕುಮಾರನನ್ನು ಚಿತ್ರದುರ್ಗ ಹೊರವಲಯದ
ಪಿಳ್ಳೇಕೇರನಹಳ್ಳಿ ಬಳಿ ಪತ್ತೆ ಮಾಡಿ ಆರೋಪಿ
ಕಡೆಯಿಂದ 40,30,000/- ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಪೊಲೀಸರ ಈ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ಕೆ. ಪರುಶುರಾಮ ಅವರು ಶ್ಲಾಘಿಸಿರುತ್ತಾರೆ.