ಕೋಲಾರ: ದೇವರ ಪ್ರಸಾದ ತಿಂದು ಭಕ್ತರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. 50ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ರೀನಿವಾಸ ನಗರದ ಬೀಗರಾಯನಹಳ್ಳಿಯಲ್ಲಿ ಗಂಗಮ್ಮ ದೇವಾಲಯವಿದೆ. ಈ ದೇವಾಲಯದಲ್ಲಿ ಹೊಸ ವರ್ಷಾಚರಣೆ ವೇಳೆ ವಿಶೇಷ ಪೂಜೆ ಮಾಡಿದ್ದಾರೆ. ಪೂಜೆ ಬಳಿಕ ದೇವಸ್ಥಾನಕ್ಕೆ ಬಂದ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ಈ ವೇಳೆ ಪ್ರಸಾದ ತಿಂದವರು ಅಸ್ವಸ್ಥಗೊಂಡಿದ್ದಾರೆ.
ಚಿತ್ರಾನ್ನ ಹಾಗೂ ಕೇಸರಿಬಾತ್ ಸೇವಿಸಿದ ಭಕ್ತರು ಅಸ್ವಸ್ಥಗೊಂಡಿದ್ದಾರೆ. 50ಕ್ಕೂ ಹೆಚ್ಚು ಜನರನ್ನು ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 12 ಜನ ಮಕ್ಕಳು, 30 ಕ್ಕೂ ಹೆಚ್ಚು ಜನ ಪುರುಷರು ಹಾಗೂ ಮಹಿಳೆಯರು ಇದ್ದಾರೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.