ಬಿಡದಿ: ಬಿಜೆಪಿ ಹೈಮಾಂಡ್ ನಾಗಪುರದಲ್ಲಿದೆ. ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಇದೆ. ಜೆಡಿಎಸ್ ಹೈಕಮಾಂಡ್ ಬಿಡದಿಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಬಿಡದಿಯ ತೋಟದಲ್ಲಿ ನಡೆಯುತ್ತಿರುವ ಜನತಾ ಪರ್ವ 1.O ಮಿಷನ್ 123 ಕಾರ್ಯಾಗಾರದ ಆರನೇ ದಿನ ಎಸ್ ಸಿ, ಎಸ್ ಟಿ ಹಾಗೂ ಹಿಂದುಳಿದ ವರ್ಗದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು ಅವರು, ನಿಮ್ಮ ಕೂಗಳತೆಯಲ್ಲಿ ನಿಮ್ಮ ಪಕ್ಷದ ವರಿಷ್ಠ ನಾಯಕರು ಇದ್ದಾರೆ. ಕಾರ್ಯಕರ್ತರು ಹೈಕಮಾಂಡ್ ನೋಡಲು ವಿಮಾನ ಹತ್ತಿ ದೆಹಲಿಗೆ ಹೋಗಬೇಕಿಲ್ಲ. ಸಾವಿರಾರು ರೂಪಾಯಿ ಖರ್ಚು ಮಾಡಬೇಕಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಜತೆ ಮೈತ್ರಿ ಸರಕಾರ ಬಿದ್ದ ಮೇಲೆ ನಾನು ಈ ರಾಜಕೀಯದ ಬಗ್ಗೆ ಜಿಗುಪ್ಸೆಗೊಂಡಿದ್ದೆ. ಪರಸ್ಪರ ಕಾಲೆಳೆಯುವ ಪ್ರವೃತ್ತಿ ಕಂಡು ನನಗೆ ರಾಜಕೀಯ ಸಾಕೆನಿಸಿತ್ತು. ಬಿಡದಿಯ ತೋಟ ಸೇರಿಕೊಂಡೆ. ನಂಗೆ ನೆಮ್ಮದಿ ಬೇಕಿತ್ತು. ಸಮ್ಮಿಶ್ರ ಸರಕಾರ ಹೋಗುತ್ತೆ ಅಂತ ನಂಗೆ ಗೊತ್ತಿತ್ತು. ಜನತೆಯ ಕೆಲಸ ಮಾಡಲು ಹೆಜ್ಜೆ ಹೆಜ್ಜೆಗೂ ಅಡ್ಡಿಗಳು, ಒತ್ತಡಗಳು. ಯಾವುದೇ ಸಂದರ್ಭದಲ್ಲೂ ಸರಕಾರ ಹೋಗುತ್ತದೆ ಅಂತ ಗೊತ್ತಿದ್ದೂ ನಾನು ಅಮೆರಿಕಕ್ಕೆ ಹೋದೆ. ಅಂತಹ ಹಂಗಿನ ಸರಕಾರ ನನಗೆ ಬೇಕಿರಲಿಲ್ಲ. ಮುಂದಿನ ಸಲ ಇದೇ ರೀತಿಯ ಅತಂತ್ರ ಸ್ಥಿತಿ ಬಂದರೆ ಮುಂದೆಂದೂ ನಾನು ಮತ ಕೇಳಲು ಬರುವುದಿಲ್ಲ.
ಸರಕಾರ ಹೋದ ಮೇಲೆ ನಾನು ಬಿಡದಿ ತೋಟಕ್ಕೆ ಬಂದ ಮೇಲೆ ದಿನವೂ ಕಾರ್ಯಕರ್ತರು ಬರುತ್ತಿದ್ದರು. ಪಕ್ಷದ ಮೇಲಿನ ಅವರ ಪ್ರೀತಿ, ಬದ್ಧತೆ ನನ್ನ ರಾಜಕೀಯ ನಿವೃತ್ತಿಯ ನಿರ್ಧಾರವನ್ನು ಬದಲಿಸಿತು.
ಬಿಡದಿಯಲ್ಲಿ ನೀವು ಕೂತಿರುವ ಈ ಜಾಗ ಹಾಗೂ ಈ ತೋಟ ನನ್ನ ಪಾಲಿನ ಪುಣ್ಯಭೂಮಿ. ನನ್ನ ಕಷ್ಟದ ದುಡಿಮೆಯಿಂದ 1983ರಲ್ಲಿ ಈ ಭೂಮಿಯನ್ನು ಖರೀದಿ ಮಾಡಿದೆ. ಕೃಷಿ ಮಾಡುವ ಉದ್ದೇಶ ನನಗಿತ್ತು. ಆದರೆ ಈ ಭೂಮಿ ನನ್ನನ್ನು ರಾಜಕೀಯಕ್ಕೆ ಎಳೆದು ತಂದಿತು.
ಒಂದು ದಿನ ನನ್ನನ್ನು ದೊಡ್ಡ ಸಂಖ್ಯೆಯ ಕಾರ್ಯಕರ್ತರು ತೋಟಕ್ಕೆ ಬಂದರು. ಅವರು ಒತ್ತಾಯ ಮಾಡಿ ಹೀಗೆ ಹೇಳಿದರು. ನೀವು ಬಿಡದಿಯಲ್ಲಿ ಹೊಂದಿದ್ದೀರಿ. ಆದರೆ, ರಾಮನಗರದಲ್ಲಿ ಜೆಡಿಎಸ್ 3ನೇ ಸ್ಥಾನದಲ್ಲಿದೆ. ಪಕ್ಷಕ್ಕಾಗಿ ತಾವು ಕೆಲಸ ಮಾಡಬೇಕು. ನಮಗೆ ಮಾರ್ಗದರ್ಶನ ಮಾಡಬೇಕು ಎಂದಾಗ ನಾನು ಅವರ ಒತ್ತಾಯಕ್ಕೆ ಮಣಿದು ರಾಜಕೀಯಕ್ಕೆ ಬರಬೇಕಾಯಿತು. ಆಗ ತಂದೆಯವರು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಬೇಕು ಎಂದು ವರದೇಗೌಡರು ಭಾರೀ ಒತ್ತಡ ಹೇರಿದರು.ಆದರೆ ನಾನು ರಾಮನಗರದಲ್ಲಿ ಕಣಕ್ಕೆ ಇಳಿಯುವಂತೆ ಮನವಿ ಮಾಡಿದೆ. ಆಗ ದೇವೇಗೌಡರು ರಾಮನಗರದಿಂದ ಸ್ಪರ್ಧಿಸಿ ಗೆದ್ದು ಸಿಎಂ ಆದರು. ಒಂದು ವೇಳೆ ಆ ಘಟನೆ ನಡೆದಿದ್ದರೆ ನಾನಿಂದು ಇಲ್ಲಿ ನಿಂತು ಮಾತನಾಡುವ ಅವಕಾಶವೇ ಇರುತ್ತಿರಲಿಲ್ಲ ಎಂದರು.