ಬೆಂಗಳೂರು: ಯುಗಾದಿ ಪರ್ವದಿನದಂದು ನಾವೆಲ್ಲ ಒಂದು ಸಂಕಲ್ಪ ಮಾಡೋಣ. ಕರ್ನಾಟಕವು ಕರ್ನಾಟಕವಾಗಿಯೇ ಉಳಿಯಬೇಕೆಂಬ ಆಶಯದಿಂದಲೇ ಈ ಸಂಕಲ್ಪ.
ಅಧಿಕಾರಕ್ಕಾಗಿ ಏನನ್ನೂ ಮಾಡಲು ಹೇಸದ ಕಿಡಿಗೇಡಿಗಳಿಗೆ, ಧರ್ಮವಿನಾಶಕ್ಕೆ ಕಂಕಣತೊಟ್ಟ ಕಿರಾತಕರಿಗೆ ಪಾಠ ಕಲಿಸುವ ಧೈರ್ಯ ಮಾಡೋಣ. ಕರ್ನಾಟಕ ನಮ್ಮದು. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ದ್ರೋಹಿಗಳದ್ದಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುರ್ಚಿ ಹಿಡಿಯಲು ಮನಸುಗಳನ್ನು ಮುರಿಯುತ್ತಿದ್ದಾರೆ. ನಾಳೆ ಮನೆಗಳನ್ನೂ ಒಡೆದು ಅಣ್ಣ-ತಮ್ಮ, ಅಕ್ಕ-ತಂಗಿ ನಡುವೆಯೂ ಬೆಂಕಿ ಇಟ್ಟು ಮನೆ ಮುರುಕರೂ ಆಗುತ್ತಾರೆ. ಹಿಂದುತ್ವದ ಹೆಸರೇಳಿಕೊಂಡು ʼಹಿಂದುತ್ವದ ವಿನಾಶʼ ಮಾಡುತ್ತಿರುವ ಈ ನಕಲಿಗಳ ಮಾತನ್ನು ಯಾರೂ ನಂಬಬಾರದು. ಕರಪತ್ರ ಹಿಡಿದು ಬಂದರೆ ಭಾವೈಕ್ಯತೆಯ ಪಾಠ ಹೇಳಿ ಕಳಿಸಿ.
ತಲೆತಲಾಂತರಗಳಿಂದ ಯುಗಾದಿ ಇದೆ, ವರ್ಷತೊಡಕೂ ಇದೆ, ಹಲಾಲೂ ಇದೆ. ʼಹಲಾಲ್ ಹಾಲಾಹಲʼವನ್ನುಈಗ ಸೃಷ್ಟಿಸಲಾಗಿದೆ. ಹಲಾಲು, ಜಟ್ಕಾ ಎಂದು ಜನರನ್ನು ಭಾವನಾತ್ಮಕವಾಗಿ ಛಿದ್ರಗೊಳಿಸಿ ಮತ ಗಿಟ್ಟಿಸುವ ಗಿಡುಗಗಳಿವು. ಹಿಂದುತ್ವ ಹೆಸರಿನಲ್ಲಿ ರಾಜಕೀಯ ಜನ್ಮ ಪಡೆದು ರಕ್ಕಸರೂಪದಲ್ಲಿ ಬೆಳೆದಿರುವ ಪಕ್ಷದ ಬಾಲಂಗೋಚಿಗಳಿವು. ಇವರು ನೈಜ ಹಿಂದುಗಳೇ ಅಲ್ಲ.
ತಲೆತಲಾಂತರಗಳಿಂದ ಇಲ್ಲದ ʼಆಹಾರ ತಾರತಮ್ಯʼ ಈಗೇಕೆ ಬಂತು? 150 ಸ್ಥಾನಗಳ ಗುರಿ ಮುಟ್ಟಲು ರೂಪಿಸಿದ ʼರೋಡ್ ಮ್ಯಾಪ್ʼ ಇದೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸರ್ವಸಮಾನ, ಸರ್ವಹಕ್ಕು, ಸರ್ವಕಲ್ಯಾಣ; ಅಂದರೆ, ʼಸರ್ವೇ ಜನಾಃ ಸುಖಿನೋ ಭವಂತುʼ ಎಂಬ ಆಶಯವುಳ್ಳ ಸಂವಿಧಾನವನ್ನೇ ಮುಗಿಸುವ ರಕ್ಕಸ ಹುನ್ನಾರಕ್ಕೆ ಇದು ನಾಂದಿಯಷ್ಟೇ.
ಕರ್ನಾಟಕವು ಎಲ್ಲರನ್ನೂ ಒಳಗೊಳ್ಳುವ ಶುದ್ಧ ಅಂತಃಕರಣದ ಮನಸುಗಳದ್ದು. ಭಾವನೆಗಳ ಕೆಂಡದ ಮಳೆ ಸುರಿಸುವ ಕಿರಾತಕರದ್ದಲ್ಲ. ಜನಪೀಡಕರನ್ನು ತಿರಸ್ಕರಿಸೋಣ. ಪರಂಪರಾಗತವಾಗಿ ಬಂದಿರುವ ಯುಗಾದಿ, ವರ್ಷತೊಡಕನ್ನು ಎಂದಿನಂತೆ ಸಂಭ್ರಮಿಸುವ ಮೂಲಕ ಇವರ ಸೋಗಲಾಡಿತನಕ್ಕೆ ಇತಿಶ್ರೀ ಹಾಡೋಣ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.