ಚಿತ್ರದುರ್ಗ, ಮಾರ್ಚ್04: ಬಂದೂಕು ತರಬೇತಿ ಪಡೆಯುವುದರ ಮೂಲಕ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಸಹಾಯಕವಾಗಿದ್ದು, ತರಬೇತಿಯಲ್ಲಿ ಪಡೆದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಸಲಹೆ ನೀಡಿದರು.
ನಗರದ ಪೊಲೀಸ್ ಸಮುದಾಯ ಭವನದಲ್ಲಿ ಈಚೆಗೆ ನಡೆದ 10 ದಿನಗಳ ಕಾಲ ಪೊಲೀಸ್ ಇಲಾಖೆ ಹಾಗೂ ರೈಫೆಲ್ ಕ್ಲಬ್ ವತಿಯಿಂದ ನಾಗರೀಕ ಬಂದೂಕು ತರಬೇತಿ ಸಮರೋಪ ಸಮಾರಂಭದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಬಂದೂಕು ತರಬೇತಿ ಜೊತೆಗೆ ಸಮಾಜಮುಖಿ ಚಟುವಟಿಕೆಗಳನ್ನು ನಿರ್ವಹಿಸುವಂತಹ ತರಬೇತಿಯೂ ಸಹ ಇದಾಗಿದೆ. ಈ ತರಬೇತಿಯಿಂದ ಬೇರೆ ಬೇರೆ ಕಡೆಗಳಿಂದ ಆಗಮಿಸಿ, ಇಲ್ಲಿ ಒಂದೇ ಕುಟುಂಬದವರಾಗಿದ್ದಾರೆ. ಅದಕ್ಕಿಂತಲೂ ಹೆಚ್ಚಿನದಾಗಿ ಜವಾಬ್ದಾರಿಯುತ ನಾಗರೀಕರಾಗಿದ್ದೀರಾ ಎಂದು ಹೇಳಿದರು.
ಬಂದೂಕು ತರಬೇತಿ ಪಡೆಯುವುದರ ಜೊತೆಗೆ ಬಂದೂಕು ಹೊಂದಲು ಅರ್ಹರಿದ್ದೀರಾ. ಪ್ರತಿಯೊಬ್ಬ ನಾಗರೀಕರು ಬಂದೂಕುಗಳನ್ನು ಯಾವ ರೀತಿ ಬಳಸಬೇಕು ಹಾಗೂ ಅದರ ಸುರಕ್ಷತೆಗಳನ್ನು ಯಾವ ರೀತಿ ಮಾಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಎಂದರು.
ಫೈರಿಂಗ್ ಮಾಡುವ ಸಂದರ್ಭದಲ್ಲಿ ನೇರ ದೃಷ್ಠಿಕೋನದಿಂದ ಗುರಿಯಿಟ್ಟು ನಿರ್ದಿಷ್ಟ ಜಾಗಕ್ಕೆ ಶೂಟ್ ಮಾಡುವುದು ಅದೊಂದು ವಿಶೇಷ ಕಲೆ. ಈ ಕಲೆಯನ್ನು ಪ್ರತಿಯೊಬ್ಬ ತರಬೇತುದಾರರು ತಿಳಿದುಕೊಳ್ಳಬೇಕು ಎಂದರು.
ಡಿವೈಎಸ್‍ಪಿ ತಿಪ್ಪೇಸ್ವಾಮಿ ಮಾತನಾಡಿ, ಬಂದೂಕು ತರಬೇತಿ ಪಡೆಯಲು ಸದೃಢವಾದ ದೇಹ ಹಾಗೂ ನೇರದೃಷ್ಠಿಕೋನ ಹೊಂದಿರಬೇಕು. ಬಂದೂಕು ಬಳಸುವಾಗ ಸಾಕಷ್ಟು ಮುಂಜಾಗ್ರತೆ ವಹಿಸುವುದು ಬಹಳ ಅಗತ್ಯವಾಗಿದೆ. ನಾಗರೀಕರು ತಮ್ಮ ಸ್ವಯಂ ರಕ್ಷಣೆಗಾಗಿ ತರಬೇತಿ ಪಡೆದು ಬಂದೂಕುಗಳನ್ನು ಪಡೆಯುವುದು ಸೂಕ್ತ ಎಂದು ತಿಳಿಸಿದರು.
ಬಂದೂಕು ತರಬೇತಿಯಲ್ಲಿ ವಕೀಲರು, ಗೃಹ ರಕ್ಷಕ ದಳದವರು, ಪತ್ರಕರ್ತರು, ಉಪನ್ಯಾಸಕರು, ಶಿಕ್ಷಕರು ಮತ್ತು ಉದ್ಯಮಿಗಳು ಭಾಗವಹಿಸಿದ್ದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಗೃಹ ರಕ್ಷಕ ದಳದ ಕಮಾಂಡೆಡ್ ಸಂಧ್ಯಾ, ಸಿಆರ್‍ಟಿಸಿ ಮಾಜಿ ಅಧ್ಯಕ್ಷ, ರೈಫಲ್ ಕ್ಲಬ್ ಅಧ್ಯಕ್ಷ ಅನಂತರೆಡ್ಡಿ ಎಂ.ಕೆ. ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥ ಮಹೇಂದ್ರನಾಥ್, ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.