ಸ್ಯಾಂಡಲ್ ವುಡ್ ನಲ್ಲಿ ನೀನಾಸಂ ಮಂಜು ನಿರ್ದೇಶನದ ಕನ್ನೇರಿ ಸಿನಿಮಾ ಸಖತ್ ಸೌಂಡ್ ಮಾಡುತ್ತಿದೆ. ಕನ್ನೇರಿ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಸಿನಿಮಾಗಳು ಬಿಡುಗಡೆಯಾಗಿವೆ ಆದರೆ ಕನ್ನೇರಿ ಸಿನಿಮಾ ಮಹಿಳಾ ಪ್ರಧಾನ ಕಥೆಯಾಗಿದ್ದರೂ ಕೂಡ ವಿಭಿನ್ನವಾಗಿ ಮೂಡಿಬಂದಿದೆ.
ಚಿತ್ರದ ಸಂಪೂರ್ಣ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚಿಗೆ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಇದೀಗ ಚಿತ್ರದ ಜೀವಾಳವಾಗಿರುವಂತ ಬೆಟ್ಟ ಕಣಿವೆಗಳ ಹಾಡಿನ ಲಿರಿಕಲ್ ವೀಡಿಯೋವನ್ನು ಬಿಡುಗಡೆ ಮಾಡಿ ಮತ್ತೆ ಎಲ್ಲರ ಚಿತ್ತ ತನ್ನತ್ತ ಸೆಳೆದಿದೆ ಕನ್ನೇರಿ ಸಿನಿಮಾ ತಂಡ. ಕೋಟಿಗಾನಹಳ್ಳಿ ರಾಮಯ್ಯ ಅವರ ಸಾಹಿತ್ಯದಲ್ಲಿ ಮೂಡಿಬಂದ ಬೆಟ್ಟ ಕಣಿವೆಯ ಸಾಂಗ್ ಕೇಳುರಿಗೆ ಹಿತವೆನಿಸಿದೆ. ಖ್ಯಾತ ನಟಿ ಶೃತಿ ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ, ಕ್ಷೀರಸಾಗರ ಅವರ ಜೇನು ಆಕಾಶದ ಅರಮನೆ ಕಾದಂಬರಿ ಎಳೆಯ ಸ್ಪೂರ್ತಿ ಈ ಚಿತ್ರಕ್ಕಿದೆ. ಪ್ರಕೃತಿಯ ಮಡಿಲಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಒಕ್ಕಲೆಬ್ಬಿಸಿದರೆ ಏನಾಗುತ್ತೆ? ಅಲ್ಲಿನ ಹೆಣ್ಣು ಮಕ್ಕಳು ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂಬುದನ್ನು ಈ ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ್, ಕರಿಸುಬ್ಬು ಒಳಗೊಂಡಂತೆ ಹಲವು ಪ್ರತಿಭಾನ್ವಿತ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಚಿತ್ರಕ್ಕೆ ಪಿ.ಪಿ ಹೆಬ್ಬಾರ್ ಬಂಡವಾಳ ಹೂಡಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಸುಜಿತ್ ಎಸ್ ನಾಯಕ್ ಸಂಕಲನ ಚಿತ್ರಕ್ಕಿದೆ.