ಚಿತ್ರದುರ್ಗ : ಹೊಸದುರ್ಗ ಹಾಗೂ ಹೊಳಲ್ಕೆರೆ ಗಡಿ ಭಾಗದಲ್ಲಿರುವ ನಾಕೀಕೆರೆ ಗ್ರಾಮದೇವತೆ ಶ್ರೀ ಕೋಡಿ ಆಲದ ಕೆಂಚಾಂಭಿಕಾ ದೇವಿಯ ಕಾರ್ತಿಕ ಮಹೋತ್ಸವ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಸೋಮವಾರ ಸಂಜೆಯಿಂದಲೇ ಭರದ ಸಿದ್ಧತೆ ಕೈಗೊಂಡ ಗ್ರಾಮಸ್ಥರು, ರಾತ್ರಿ 10.30ರಿಂದ ಶ್ರೀ ದೇವಿ ಪಾರಾಯಣ ನಡೆಸಿದರು. ಇದೇ ವೇಳೆ ಗ್ರಾಮದ ಮಹಿಳೆಯರೆಲ್ಲರೂ ಸೇರಿ ಸಾವಿರಾರು ಹೋಳಿಗೆ ತಯಾರಿಸಿದರು.
ಮಂಗಳವಾರ ಬೆಳಗ್ಗೆ 5.30ಕ್ಕೆ ದೇವಿಗೆ ಅಭಿಷೇಕ ನಡೆಸಲಾಯಿತು. ಬೆಳಗ್ಗೆ 9.30ಕ್ಕೆ ಕಾರ್ತಿಕೋತ್ಸವ ಜರುಗಿತು. 10.30ರಿಂದ ಸಾರ್ವಜನಿಕರಿಗೆ ಹೋಳಿಗೆ ಅನ್ನ ಸಂಪತರ್ಪಣೆ ನೆರವೇರಿತು.
ಕಾರ್ತಿಕೋತ್ಸವದ ಅಂಗವಾಗಿ ಕೋಡಿ ಆಲದ ಮರಕ್ಕೆ ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ದೇವಿಗೆ ವಿವಿಧ ಆಭರಣ, ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಕೋಡಿ ಕಾರ್ಯಕ್ರಮದ ಅಂಗವಾಗಿ ಸೇಜಿ ಹಾಗೂ ಬಾಣಪ್ಪ ದೇವರುಗಳನ್ನು ಸನ್ನಿಧಾನಕ್ಕೆ ಕರೆತರಲಾಗಿತ್ತು.
ಕಾರ್ಯಕ್ರಮದಲ್ಲಿ ನಾಕೀಕೆರೆ, ಬೂದಿಪುರ, ಹಾಲೇನಹಳ್ಳಿ, ಉಪ್ಪರಿಗೇನಹಳ್ಳಿ, ನಂದನಹೊಸೂರು, ದೊಡ್ಡಕಿಟ್ಟದಹಳ್ಳಿ, ಗೂಳಿಹೊಸಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಭಾಗವಹಿಸಿದ್ದರು.
ಹೊಸದುರ್ಗ ತಾಲೂಕಿನ ಬಿಜೆಪಿ ಮುಖಂಡ ಡಿ.ಗುರುಸ್ವಾಮಿ, ಯುವ ಮುಖಂಡ ನವೀನ್ ಯಾದವ್ ಸೇರಿದಂತೆ ಹಲವು ಮುಖಂಡರು ಭೇಟಿ ನೀಡಿ ದೇವಿಯ ಆಶೀವಾದ ಪಡೆದುಕೊಂಡರು.