ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಡಿ.15) : ಸಾಲ ಮಾಡಿ ಬಿತ್ತನೆ ಮಾಡಿರುವ ರೈತ ಅಕಾಲಿಕ ಮಳೆಯಿಂದಾಗಿ ಬೆಳೆಯನ್ನು ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದು, ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಜಿಲ್ಲಾಧಿಕಾರಿ, ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯವರು ರೈತರ ಜಮೀನುಗಳಿಗೆ ಹೋಗಿ ಸರ್ವೆ ನಡೆಸಿ ಕೂಡಲೆ ನ್ಯಾಯೋಚಿತವಾದ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಉಗ್ರವಾದ ಪ್ರತಿಭಟನೆ ನಡೆಸಲಾಗುವುದೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಪ್ರಧಾನ ಅಂಚೆ ಕಚೇರಿ ರಸ್ತೆಯಲ್ಲಿರುವ ಅಖಂಡ ಕರ್ನಾಟಕ ರೈತ ಸಂಘದ ಕಚೇರಿಯಲ್ಲಿ ರೈತರೊಂದಿಗೆ ಸಭೆ ನಡೆಸಿ ಮಾತನಾಡಿದ ಸೋಮಗುದ್ದು ರಂಗಸ್ವಾಮಿ ಮೆಕ್ಕೆಜೋಳ, ರಾಗಿ, ಈರುಳ್ಳಿ, ಶೇಂಗಾ, ಎಲ್ಲಾ ಬಗೆಯ ತರಕಾರಿಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತ ಕಂಗಾಲಾಗಿದ್ದಾನೆ. ಬೆಳೆ ವಿಮೆ ಪಾವತಿಸಿರುವ ರೈತರಿಗೆ ಪರಿಹಾರ ಪಾವತಿಸದ ವಿಮೆ ಕಂಪನಿಯವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ರೈತರು, ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ಬದುಕುವುದು ದುಸ್ತರವಾಗಿದೆ. ದಾಖಲಾತಿಗಳಿಗಾಗಿ ತಾಲ್ಲೂಕು ಕಚೇರಿಗೆ ರೈತರು ಅಲೆದು ಅಲೆದು ಸಾಕಾಗಿ ಕೇಳಿದರೆ ಸರ್ವರ್ ಇಲ್ಲ ಎನ್ನುವ ಸಿದ್ದ ಉತ್ತರ ನೀಡುತ್ತಾರೆ. ಅಲ್ಪಸ್ವಲ್ಪ ಬೆಳೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ನಿಗಧಿಪಡಿಸಬೇಕು.
ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ರೈತರು ಸಾಲ ಪಡೆದಿದ್ದು, ಬೇರೆ ಬ್ಯಾಂಕಿನವರು ಓ.ಟಿ.ಎಸ್. ಮಾಡಿ ರೈತರಿಂದ ಸಾಲ ಕಟ್ಟಿಸಿಕೊಳ್ಳುತ್ತಿದ್ದಾರೆ. ಕರ್ನಾಟಕ ಗ್ರಾಮೀಣ ಬ್ಯಾಂಕ್‍ನವರು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅಕಾಲಿಕ ಬೆಳೆಯಿಂದ ರೈತರ ಬೆಳೆಗಳು ನಾಶವಾಗಿರುವುದರಿಂದ ಎಲ್ಲಾ ಬ್ಯಾಂಕ್‍ಗಳಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂದು ಸಭೆಯ ಮೂಲಕ ಸಂಬಂಧಪಟ್ಟವರನ್ನು ಸೋಮಗುದ್ದು ರಂಗಸ್ವಾಮಿ ಒತ್ತಾಯಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಲ್.ಬಸವರಾಜಪ್ಪ ಅಳಗವಾಡಿ, ತಾಲ್ಲೂಕು ಅಧ್ಯಕ್ಷ ನಾಗರಾಜ್ ಮುದ್ದಾಪುರ, ಎಂ.ಸಿದ್ದಪ್ಪಹಳಿಯೂರು, ವೀರಣ್ಣ, ಕಲ್ಲಣ್ಣ, ಗುರುಸಿದ್ದಪ್ಪ ಜಾನುಕೊಂಡ, ನಂಜುಂಡಪ್ಪ ಮದಕರಿಪುರ, ಗೌಡ್ರು ಪರಮಶಿವಣ್ಣ ಸಭೆಯಲ್ಲಿ ಭಾಗವಹಿಸಿದ್ದರು.