ಚಿತ್ರದುರ್ಗ,(ಆಗಸ್ಟ್ 23) : ಕುಟುಂಬದ ಎಲ್ಲಾ ಸದಸ್ಯರು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ರೂಪ ಹೇಳಿದರು.
ತಾಲ್ಲೂಕಿನ ಗೊಡಬನಹಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಉಪಯುಕ್ತತೆ ಕುರಿತು ಆರೋಗ್ಯ ಅರಿವು ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಭಾರತ ಸರ್ಕಾರದ ಒಂದು ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ. ಪ್ರತಿ ಬಿ.ಪಿ.ಎಲ್ ಕುಟುಂಬಕ್ಕೆ ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ರೂ.5 ಲಕ್ಷಗಳ ತನಕ ಪಾವತಿಸುವ ಆರೋಗ್ಯ ವಿಮಾ ಯೋಜನೆ. ಇದು ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ಸಂಯೋಜಿತ ಯೋಜನೆಯಾಗಿದೆ ಎಂದರು.
ಎ.ಪಿ.ಎಲ್, ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಎಲ್ಲರು ಈ ಕಾರ್ಡ್ ಮಾಡಿಸಿ ಉಚಿತ ವೈದ್ಯಕೀಯ ವೆಚ್ಚಗಳನ್ನು ಪಡೆದುಕೊಳ್ಳಿ. ಸಮುದಾಯ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತಿ, ಜಿಲ್ಲಾ ಆಸ್ಪತ್ರೆಯಲ್ಲಿ ಈ ಕಾರ್ಡ್ ಮಾಡಿಕೊಡಲಾಗುತ್ತದೆ. ಶಸ್ತ್ರಚಿಕಿತ್ಸೆ, ಗಂಭೀರ ಸ್ವರೂಪದ ಕಾಯಿಲೆಗಳ ವೆಚ್ಚ ಭರಿಸಲು ಸರ್ಕಾರ ವಿಮೆಯ ಮೂಲಕ ಪಾವತಿಸುತ್ತದೆ. ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಿ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಈ ಯೋಜನೆಯಡಿಯಲ್ಲಿ ಪ್ರಾಥಮಿಕ, ದ್ವಿತೀಯ, ಸಂಕೀರ್ಣ ದ್ವಿತೀಯ, ತೃತೀಯ ಹಂತದ ಮತ್ತು ತುರ್ತು ಚಿಕಿತ್ಸಾ ಹಂತದ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಅರ್ಹತಾ ರೋಗಿಗಳು, ಸಾಮಾನ್ಯ ರೋಗಿಗಳು ಎಂದು ಎರಡು ವರ್ಗಗಳಾಗಿ ರೋಗಿಗಳನ್ನು ಗುರುತಿಸಲಾಗುತ್ತದೆ.
ಅರ್ಹತಾ ರೋಗಿಗಳಿಗೆ ಒಂದು ವರ್ಷಕ್ಕೆ ರೂ.5/- ಲಕ್ಷಗಳವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಸಾಮಾನ್ಯ ರೋಗಿಗಳಿಗೆ ಪ್ಯಾಕೇಜ್ ದರದ 30% ರಿಯಾಯ್ತಿ ನೀಡಿ ಪಾವತಿಯೊಂದಿಗೆ ಗರಿಷ್ಟ ವರ್ಷಕ್ಕೆ ರೂ.1.50/- ಲಕ್ಷದಷ್ಟು ವೈದ್ಯಕೀಯ ವೆಚ್ಚ ಭರಿಸಲಾಗುತ್ತದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಕುಷ್ಠರೋಗ ಪ್ರಕರಣ ಪತ್ತೆ ಕಾರ್ಯಕ್ರಮದ ಬಗ್ಗೆ ಮಾತನಾಡಿ ಪ್ರಕರಣಗಳನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳ ಪಡಿಸಿದಲ್ಲಿ ಅಂಗವೈಕಲ್ಯ ತಪ್ಪಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಗೊಡಬನಹಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಕ್ಷತಾ, ಸಾಮಾಜಿಕ ವರ್ತೆನೆ ಬದಲಾವಣೆ ಸಂಯೋಜಕ ಸುನಿಲ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಧರ್, ತಿಪ್ಪೇಸ್ವಾಮಿ, ಎಲ್.ಮಂಜುನಾಥ್ ಇದ್ದರು.
ಮಾಹಿತಿ ನೀಡಿದವರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ.