ವರದಿ ಮತ್ತು ಫೋಟೋ ಕೃಪೆ
ಡಾ ಎಚ್ ಕೆ ಎಸ್ ಸ್ವಾಮಿ
ರಾಜ್ಯ ಉಪಾಧ್ಯಕ್ಷರು,
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಚಿತ್ರದುರ್ಗ
ಮೊ : 9686560778
ಚಿತ್ರದುರ್ಗ, (ಡಿ.25) : ನಗರದ ಮೆದೇಹಳ್ಳಿ ರಸ್ತೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬಹುತೇಕ ಸರ್ವಿಸ್ ರಸ್ತೆಯ ಪಕ್ಕದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿಲ್ಲ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಡಾ ಎಚ್ ಕೆ ಎಸ್ ಸ್ವಾಮಿ ತಿಳಿಸಿದ್ದಾರೆ.
ಯಾರಾದರೂ ಈ ಊರಿಗೆ ನಗರದ ವೀಕ್ಷಣೆಗೆಂದು ಬಂದವರಿಗೆ ಈ ದೃಶ್ಯವನ್ನು ನೋಡಿ ಅಘಾತವಾದರೂ ಆಗಬಹುದು ಎಂದೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಎಚ್ ಕೆ ಸ್ವಾಮಿ ಆರೋಪಿಸಿದ್ದಾರೆ.
ಬಿದ್ದಿರುವ ಕಸವನ್ನ ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಿದರೆ ನೋಡುಗರಿಗೆ ಆನಂದವಾದರೂ ಉಂಟಾಗುತ್ತದೆ, ಈಗ ರಸ್ತೆ ಬದಿಯಲ್ಲಿ ಓಡಾಡುವರೆಲ್ಲ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ಮೆದೇಹಳ್ಳಿ ಮೇಲ್ಸೇತುವೆ ಸರ್ವೀಸ್ ರಸ್ತೆಯ ಕಥೆಯಲ್ಲ. ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ, ಚರಂಡಿ ಮತ್ತು ನಿರ್ಜನ ಪ್ರದೇಶದಲ್ಲಿ ಬಹುತೇಕ ಈ ರೀತಿಯ ರಾಶಿ ರಾಶಿ ಕಸ ಕಾಣುತ್ತದೆ.
ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮೆದೇಹಳ್ಳಿ ಪಂಚಾಯಿತಿ, ನಗರಾಡಳಿತ ಯಾವುದರ ಕಣ್ಣಿಗೂ ಸಹ ಬೀಳದಷ್ಟು ಕಸ ಸಂಗ್ರಹವಾಗುತ್ತಿದೆ.
ಪ್ಲಾಸ್ಟಿಕ್ ಅನ್ನು ಪ್ರಾಣಿ ಪಕ್ಷಿಗಳು ದಿನನಿತ್ಯ ತಿಂದು ಆರೋಗ್ಯ ಕೆಡಿಸಿಕೊಳ್ಳುತ್ತಿವೆ .
ಶೀಘ್ರವಾಗಿ ನಗರಾಡಳಿತ ಅಥವಾ ರಾಷ್ಟ್ರೀಯ ದಾರಿ ಪ್ರಾಧಿಕಾರದವರು ಈ ರಸ್ತೆಯನ್ನು ಸ್ವಚ್ಛಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಸಾರ್ವಜನಿಕರೂ ಕೂಡಾ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ತಮ್ಮ ಮನೆ, ಅಂಗಡಿ, ಬೀದಿ ಬದಿಯ ವ್ಯಾಪಾರಿಗಳು ತ್ಯಾಜ್ಯವನ್ನು ತಂದು ರಸ್ತೆಯ ಪಕ್ಕದಲ್ಲಿ ಸುರಿಯುವುದು ಎಷ್ಟು ಸರಿ ? ಸಾರ್ವಜನಿಕರು ಕಸದ ವಾಹನಗಳಿಗೆ ಕಸವನ್ನು ಮಾಸಿಕ ಶುಲ್ಕ ನೀಡದೆ ಎಲ್ಲೆಂದರಲ್ಲಿ (ಸರ್ವೀಸ್ ರಸ್ತೆಯ ಪಕ್ಕ, ಚರಂಡಿ ಹೀಗೆ ನಿರ್ಜನ ಪ್ರದೇಶಗಳಲ್ಲಿ) ಕಸ ಬಿಸಾಡುತ್ತಿರುವ ದೃಶ್ಯ ಸಾಮಾನ್ಯವಾಗಿದ್ದು ನೋಡುಗರಿಗೆ ಅಸಹ್ಯ ಹುಟ್ಟಿಸುವಂತಿದೆ. ಎಲ್ಲದಕ್ಕೂ ಆಡಳಿತ ಯಂತ್ರವೇ ಹೊಣೆಯಲ್ಲ. ನಾಗರೀಕರು ಕೂಡಾ ನಗರದ ಸ್ವಚ್ಚತೆಯ ಬಗ್ಗೆ ಪ್ರಜ್ಞಾವಂತರಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಈ ಮೂಲಕ ನಗರದ ಸೌಂದರ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಡಾ. ಸ್ವಾಮಿಯವರು ಮನವಿ ಮಾಡಿದ್ದಾರೆ.