ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಗ್ರಾಹಕರು ನಿದ್ದೆ ಮಾಡದೆ ಎಚ್ಚೆತ್ತುಕೊಂಡಿದ್ದಾಗ ಮಾತ್ರ ಮೋಸ, ವಂಚನೆಯನ್ನು ತಡೆಯಬಹುದು ಎಂದು ಕರ್ನಾಟಕ ಗ್ರಾಹಕ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟದ ಸಂಸ್ಥಾಪಕ ಮುಖ್ಯಸ್ಥ ಸೋಮಶೇಖರ್ ವಿ.ಕೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ, ಕರ್ನಾಟಕ ಗ್ರಾಹಕ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟ ಹಾಗೂ ಚಿತ್ರದುರ್ಗ ಬಳಕೆದಾರರ ಹಿತರಕ್ಷಣಾ ಸಂಘದ ಸಹಯೋಗದೊಂದಿಗೆ ಹೊಳಲ್ಕೆರೆ ರಸ್ತೆಯಲ್ಲಿರುವ ಎಸ್.ಜೆ.ಎಂ.ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಮಾನವ ಹಕ್ಕುಗಳ ಕುರಿತ ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಹಕರು ಯಾವುದೇ ವಸ್ತುಗಳನ್ನು ಹಣ ನೀಡಿ ಖರೀಧಿಸಿ ಮೋಸಕ್ಕೊಳಗಾದಾಗ ಗ್ರಾಹಕರ ಹಕ್ಕುಗಳ ಅಡಿ ಪ್ರಶ್ನಿಸುವ ಗುಣ ಬೆಳೆಸಿಕೊಂಡಾಗ ಮಾತ್ರ ಅನ್ಯಾಯವಾಗುವುದನ್ನು ತಪ್ಪಿಸಬಹುದು. ಅದಕ್ಕಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಗ್ರಾಹಕರ ಹಕ್ಕುಗಳ ಕುರಿತು ತಿಳಿದುಕೊಂಡಿರಬೇಕು.
ಫುಡ್ ಸೆಕ್ಯುರಿಟಿ ಆಕ್ಟ್ ಕೂಡ ಇದೆ. ಏರ್‍ಟೆಲ್, ಬಿ.ಎಸ್.ಎನ್.ಎಲ್. ವೊಡಾಫೋನ್, ಜಿಯೋ ಹೀಗೆ ಅನೇಕ ಮೊಬೈಲ್ ಕಂಪನಿಗಳಿವೆ. ಗ್ರಾಹರಿಗೆ ಉತ್ತಮ ಸೇವೆ ನೀಡಬೇಕು. ಇಲ್ಲದಿದ್ದರೆ ಪ್ರಶ್ನೆ ಮಾಡುವ ಹಕ್ಕಿದೆ ಎನ್ನುವುದೆ ಕೆಲವರಿಗೆ ಗೊತ್ತಿಲ್ಲ.
ಇನ್ನು ರಾಜಕಾರಣಕ್ಕೆ ಬಂದರೆ ಚುನಾವಣೆಯಲ್ಲಿ ಬೂತ್ ಕ್ಯಾಪ್ಚರ್, ಹಣ ನೀಡಿ ಮತಗಳನ್ನು ಖರೀಧಿಸುವುದು, ಗಿಫ್ಟ್‍ಗಳನ್ನು ನೀಡಿ ಆಸೆ ಆಮಿಷಗಳನ್ನು ಒಡ್ಡುವುದು, ಆಳುವ ಸರ್ಕಾರಗಳು ಉಚಿತ ಭಾಗ್ಯಗಳನ್ನು ನೀಡುವುದು ಕೂಡ ಒಂದು ರೀತಿಯಲ್ಲಿ ಗ್ರಾಹಕರನ್ನು ವಂಚಿಸಿದಂತೆ ಗ್ರಾಹಕರು ಯಾಮಾರದಿರಲು ಅನೇಕ ಶಕ್ತಿಗಳಿವೆ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಿ ಎಂದು ತಿಳಿಸಿದರು.
ಸರ್ಕಾರ ಪ್ರತಿ ವರ್ಷವೂ ಮಂಡಿಸುವ ಬಜೆಟ್‍ನಲ್ಲಿ ಪ್ರಜೆಗಳಿಗೆ ಏನಿರಬೇಕು. ಏನಿಲ್ಲ ಎನ್ನುವುದನ್ನು ಕೇಳುವ ಹಕ್ಕು ಕೂಡ ಪ್ರತಿ ಮತದಾರನಿಗಿದೆ. ಸೇವೆಯಲ್ಲಿ ವ್ಯತ್ಯಾಸವಾದಾಗಲು ತಟ್ಟಿ ಕೇಳುವ ಅಧಿಕಾರವಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ಪದಾರ್ಥಗಳು ಸಿಕ್ಕರೆ ಗ್ರಾಹಕರು ಹಣ ನೀಡಿ ಖರೀಧಿಸುತ್ತಾರೆ. ಎಲ್ಲಿಯೂ ಲೋಪವಾಗದಂತೆ ಎಚ್ಚರವಹಿಸುವ ಜಾಗೃತಿ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎಸ್.ಜೆ.ಎಂ.ಕಾಲೇಜು ಪ್ರಾಚಾರ್ಯರಾದ ಡಾ.ಕೆ.ಸಿ.ರಮೇಶ್ ಮಾತನಾಡಿ ಮಾನವ ಹಕ್ಕುಗಳಿಂದಾಗುವ ಉಪಯೋಗಗಳೇನು ಎನ್ನುವುದನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ತಿಳಿದುಕೊಂಡಾಗ ಜೀವನದಲ್ಲಿ ಮೋಸ ಹೋಗುವುದನ್ನು ನಿಯಂತ್ರಿಸಲು ನೆರವಾಗಲಿದೆ. ಹಾಗಾಗಿ ಶಿಕ್ಷಣದ ಜೊತೆ ಗ್ರಾಹಕರ ಹಕ್ಕುಗಳ ಜಾಗೃತಿ ಕುರಿತು ಸದಾ ಎಚ್ಚರದಿಂದಿರುವಂತೆ ಹೇಳಿದರು.
ಚಿತ್ರದುರ್ಗ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ವೆಂಕಟೇಶ್, ಪ್ರಾಧ್ಯಾಪಕ ಡಾ.ಆರ್.ವಿ.ಹೆಗಡಾಳ್, ಪ್ರಾಧ್ಯಾಪಕ ಡಾ.ರೇವಣ್ಣ, ಶಾಂತಮ್ಮ ವೇದಿಕೆಯಲ್ಲಿದ್ದರು.