ಬೆಂಗಳೂರು: ಸಿಡಿ ಕೇಸ್‌ನಿಂದ ಹೊರ ಬಂದು ಸಚಿವ ಸಂಪುಟ ಸೇರ್ಪಡೆಯಾಗಲು ಪ್ರಯತ್ನಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಮುಖ್ಯಮಂತ್ರಿ ಸಬವರಾಜ್ ಬೊಮ್ಮಯಿಯವರನ್ನ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇಂದು ಬೆಳಿಗ್ಗೆ ಆರ್‌ಟಿ ನಗರದಲ್ಲಿರುವ ಮುಖ್ಯಮಂತ್ರಿಗಳ ಖಾಸಗಿ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತು ಮಾತುಕತೆ ನಡೆಸಿದರು.ಇನ್ನೂ ಬಾಕಿ ಉಳಿದ ನಾಲ್ಕು ಸಚಿವ ಸಂಪುಟ ವಿಸ್ತರಣೆ ವಿಚಾರವನ್ನ ಹೈಕಮಾಂಡ್ ನಾಯಕರ ಜೊತೆಗೆ ಚರ್ಚಿಸಲಿರುವ ಬೆನ್ನೆಲ್ಲೇ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿಯವರನ್ನ ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಮನವಿ ಮಾಡಿದ್ದಾರೆ. ಇನ್ನೂ ಹಲವು ದಿನಗಳಿಗೆ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡಿರುವ ರಮೇಶ್ ಜಾರಕಿಹೊಳಿ ಆದಷ್ಟು ಬೇಗ ಸಿಡಿ ಪ್ರಕರಣವನ್ನ ಇತ್ಯರ್ಥ ಪಡಿಸಿ, ಕಳೆದುಕೊಂಡಿರುವ ಅಧಿಕಾರವನ್ನ ಮತ್ತೆ ಪಡೆಯುವ ಕುರಿತು ಸಮಾಲೋಚನೆ ನಡೆಸಿದರು.
ಆದಷ್ಟು ಬೇಗ ಪ್ರಕರಣ ಇತ್ಯರ್ಥಕ್ಕೆ ಸಹಕಾರ ನೀಡಬೇಕು, ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎನ್ನುವ ವಿಷಯಗಳನ್ನಿಟ್ಟುಕೊಂಡು ರಾಜಕೀಯ ಚರ್ಚೆ ನಡೆಸಿದರು ಎನ್ನಲಾಗಿದೆ. ಸಿಎಂ ಭೇಟಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ರಮೇಶ್ ಜಾರಕಿಹೊಳಿ ನಿರಾಕರಿಸಿದರು. ಮಾಧ್ಯಮಗಳ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸುತ್ತಾ ಮುಖ್ಯಮಂತ್ರಿಗಳ ನಿವಾಸದಿಂದ ನಿರ್ಗಮಿಸಿದರು.