ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಹೋಗುವುದಕ್ಕೆ ಈಗಲೂ ಅನುಮತಿ ಇಲ್ಲ. ಆದ್ರೆ ಮಗಳ ಹೆರಿಗೆಗಾಗಿ ಒಂದು ತಿಂಗಳ ಕಾಲ ಕೋರ್ಟ್ ನಿಂದ ಅನುಮತಿಯನ್ನು ಪಡೆದುಕೊಂಡು ಬಳ್ಳಾರಿಯಲ್ಲಿ ಜನರ ನಡುವೆ ಇದ್ದಾರೆ. ಇದರ ನಡುವೆ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಭಾಗಿಯಾಗುತ್ತಾ ಫುಲ್ ಆಕ್ಟೀವ್ ಆಗಿದ್ದಾರೆ. ಇಂದು ಕೂಡ ಬಳ್ಳಾರಿ ಜನರನ್ನು ಉದ್ದೇಶಿಸಿ ಮಾತನಾಡಿದ ಜನಾರ್ದನ ರೆಡ್ಡಿ, ಹುಲಿ ಬೇಟೆಗೆ ನಿಂತ್ರೆ ಬೇಟೆ ಆಡೇ ಆಡುತ್ತೆ ಎಂದಿದ್ದಾರೆ.
ನಗರದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, 12 ವರ್ಷದಿಂದ ಸುಮ್ಮನೆ ಇದ್ದೀನಿ ಅಂದ್ರೆ ಏನು ಆಗಲ್ಲ ಅಂತ ಅಲ್ಲ. ಮುಂದೆ ಆಗುವ ಕೆಲಸಗಳಿಗೆ ತೊಂದರೆಯಾಗಬಾರದು ಅಂತ. ರಸ್ತೆಯಲ್ಲಿ ಬರುವಾಗ ಒಬ್ಬ ಬಾಲಕ ಹುಲಿ ಫೋಟೋ ತೋರಿಸಿ, ನನ್ನನ್ನು ಹುಲಿ ಎಂದ. ಹಸಿವಾದಾಗ ಹುಲಿ ಬೇಟೆಗೆ ನಿಂತ್ರೆ ಬೇಟೆ ಆಡಿಯೇ ಆಡುತ್ತೆ. ನಾನು ಬೆಂಗಳೂರಿನಲ್ಲಿಯೇ ಐಷರಾಮಿ ಜೀವನ ಸಾಗಿಸಬಹುದು. ಆದ್ರೆ ನನಗೆ ಮತ್ತು ನನ್ನ ಕುಟುಂಬಕ್ಕೆ ಬಳ್ಳಾರಿಯ ಜನರ ಅಭಿವೃದ್ಧಿ ಮುಖ್ಯ. ನನ್ನ ಕೊನೆಯುಸಿರು ಇರುವ ತನಕ ಬಳ್ಳಾರಿ ಜನರಿಗಾಗಿ ಮೀಸಲಿರಿಸುತ್ತೇನೆ.
ಯಾವತ್ತೂ ಜನರಿಗೆ ಮೋಸ ಮಾಡಿಲ್ಲ, ಜನರ ಜೇಬಿಗೆ ಕತ್ತರಿ ಹಾಕಿಲ್ಲ. ನನ್ನ ತಂದೆ ಪೊಲೀಸ್ ಪೇದೆಯಾಗಿ ಕೆಲಸ ಮಾಡಿರಬಹುದು. ಆದರೆ ನನ್ನ ತಾತಂದಿರು ರಾಜರಂತೆ ಬದುಕಿರುವವರು. ಅವರ ರಕ್ತ ನನ್ನಲ್ಲಿದೆ. ಅದನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ. ಕಾಂಗ್ರೆಸ್, ಬಿಜೆಪಿ ಅಂತ ನಾನು ಹೇಳುವುದಿಲ್ಲ. ನಮ್ಮ ಕುಟುಂಬದ ಮೇಲೆ ಬಳ್ಳಾರಿ ಜನರ ಆಶೀರ್ವಾದವಿರಲಿ ಎಂದಿದ್ದಾರೆ.