ಬೆಂಗಳೂರು: ಅನಾರೋಗ್ಯ ಕಾರಣದಿಂದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿಯೇ ಇದ್ದ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ಇಂದು ಡಿಸ್ಚಾರ್ಜ್ ಆಗಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆ ಮನೆಗೆ ತೆರಳಿದ್ದಾರೆ.
ಎಸ್ ಎಂ ಕೃಷ್ಣ ಅವರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯಾಗಿದೆ ಎಂದು ವೈದ್ಯರು ತಿಳಿಸಿದ್ದ ಕಾರಣದಿಂದಾಗಿ ಮಣಿಪಾಲ್ ಆಸ್ಪತ್ರೆಯಿಂದ ಕೃಷ್ಣ ಅವರನ್ನು ಸದಾಶಿವನಗರದ ಮನೆಗೆ ಕರೆದೊಯ್ದಿದ್ದಾರೆ.
ಎಸ್ ಎಂ ಕೃಷ್ಣ ಅವರಿಗೆ ಶ್ವಾಸಕೋಶದ ಸಮಸ್ಯೆ ಕೂಡ ಕಾಡುತ್ತಿತ್ತು. ತೀವ್ರ ಜ್ವರದಿಂದ ಬಳಲುತ್ತಿದ್ದ ಕೃಷ್ಣ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ಡಿಕೆ ಶಿವಕುಮಾರ್ ಸೇರಿದಂತೆ ರಾಜಕೀಯ ನಾಯಕರು ಬಂದು ಎಸ್ ಕೃಷ್ಣ ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಹೋಗಿದ್ದರು. ಅವರ ಆರೋಗ್ಯದಲ್ಲಿ ಬೇಗ ಚೇತರಿಕೆ ಕಾಣಲಿ ಎಂದು ಬೇಡಿಕೊಂಡಿದ್ದರು. ಇದೀಗ ಎಲ್ಲರ ಹಾರೈಕೆಯ ಫಲ ಸಿಕ್ಕಿದ್ದು, ಎಸ ಎಂ ಕೃಷ್ಣ ಅವರು ಗುಣಮುಖರಾಗಿದ್ದಾರೆ.