ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.26 : ನಗರದಲ್ಲಿ ಶನಿವಾರ ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ನಾಯಕ ಜನಾಂಗ ಹಾಗೂ ಇತರೆಯವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮನವಿ ಮಾಡಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಕೋಟೆ ಮುಂಭಾಗದಿಂದ ಹೊರಡುವ ಮೆರವಣಿಗೆ ಮದಕರಿನಾಯಕ ವೃತ್ತ ತಲುಪಲಿದ್ದು, ತ.ರಾ.ಸು.ರಂಗಮಂದಿರದಲ್ಲಿ ಮಧ್ಯಾಹ್ನ 12 ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವರು. ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್‍ಭಾಷಾ, ಜಿಲ್ಲೆಯ ಎಲ್ಲಾ ಶಾಸಕರುಗಳು, ವಿಧಾನಪರಿಷತ್ ಸದಸ್ಯರು, ಸಂಸದ ಎ.ನಾರಾಯಣಸ್ವಾಮಿ ಇವರುಗಳು ಭಾಗವಹಿಸಲಿದ್ದಾರೆಂದು ಹೇಳಿದರು.
ಹಿರಿಯೂರು ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಡಾ.ಮಾರುತಿ ಎಸ್. ಉಪನ್ಯಾಸ ನೀಡುವರು ಎಂದರು.
ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಸರ್ವರೂ ಪಾಲ್ಗೊಳ್ಳಿ ಎಂದು ವಿನಂತಿಸಿ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ನಾಗೇಂದ್ರ ಇವರು ಚಿತ್ರದುರ್ಗಕ್ಕೆ ಆಗಮಿಸಿದಾಗ ವಾಲ್ಮೀಕಿ ಭವನವನ್ನು ವೀಕ್ಷಿಸಿದ್ದಾರೆ. ಆದಷ್ಠು ಬೇಗ ಪೂರ್ಣಗೊಂಡು ಉದ್ಘಾಟನೆಯಾಗಲಿ ಎಂದು ನುಡಿದರು.
ಇತಿಹಾಸ ವಿಭಾಗದಿಂದ ಡಾ.ಎನ್.ಎಸ್.ಮಹಂತೇಶ್, ಚಿತ್ರಕಲೆ ಹಾಗೂ ಫೋಟೋಗ್ರಫಿಯಿಂದ ಕ್ರಿಯೇಟಿವ್ ವೀರೇಶ್, ಉದ್ಯಮಿ ಅಹೋಬಲ ಶೋರೂಂನ ಅರುಣ್‍ಕುಮಾರ್, ಪತ್ರಿಕೋದ್ಯಮ ವಿಭಾಗದಿಂದ ಹಿರಿಯ ಪತ್ರಕರ್ತ ಎಂ.ಎನ್. ಅಹೋಬಲಪತಿ, ಸಮಾಜ ಸೇವೆಗಾಗಿ ನಿವೃತ್ತ ಚೀಫ್ ಇಂಜಿನಿಯರ್ ಟಿ.ಆರ್.ರುದ್ರಪ್ಪ ಇವರುಗಳಿಗೆ ಜಿಲ್ಲಾ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ತಿಳಿಸಿದರು.
ಡಿ.ಗೋಪಾಲಸ್ವಾಮಿ ನಾಯಕ, ಸೋಮೇಂದ್ರ, ಅಹೋಬಲ ಶೋರೂಂ ಮಾಲೀಕ ಅರುಣ್‍ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.