ಕೋಲಾರ: ಹೊಸ ಸರ್ಕಾರಗಳು ಬಂದಾಗ ವಿರೋಧ ಪಕ್ಷದವರು ಕೆಲವೊಂದು ಆರೋಪಗಳನ್ನು ಮಾಡುತ್ತಾರೆ. ಕಳೆದ ಬಾರಿ ಬಿಜೆಪಿ ಸರ್ಕಾರವಿದ್ದಾಗ ಕಾಂಗ್ರೆಸ್ ನವರು ಕಮಿಷನ್ ಆರೋಪದ ವಿಚಾರಕ್ಕೆ ಪ್ರತಿಭಟನೆ ಮಾಡಿದ್ದರು. ಇದೀಗ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಬಿಜೆಪಿ ನಾಯಕರು ವರ್ಗಾವಣೆ ದಂಧೆಯ ಆರೋಪ ಮಾಡಿದ್ದಾರೆ.
ಇದೇ ವಿಚಾರಕ್ಕೆ ಮಾಜಿ ಸಚಿವ ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರನ್ನು ದೇವರ ಸನ್ನಿಧಿಗೆ ಕರೆದಿದ್ದಾರೆ. ನೀವೂ, ನಿಮ್ಮ ಮಗ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿಲ್ಲ ಎಂದು ಗಣಪತಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಎಂದು ಸವಾಲು ಹಾಕಿದ್ದಾರೆ. ಈ ಹಿಂದೆ ಬಿಜೆಪಿ ಪಕ್ಷದ ಮೇಲೆ ಆರೋಪ ಮಾಡಿದ್ದವರು. ಆದರೆ ಈಗಿನ ಸರ್ಕಾರ ದಂಧೆಯಲ್ಲಿ ತೊಡಗಿದೆ. ಬೇಕಾದರೆ ಹಾಲಿ ಅಥವಾ ನಿವೃತ್ತ ಜಡ್ಜ್ ನೇಮಿಸಿ ತನಿಖೆ ನಡೆಸಲಿ ಎಂದಿದ್ದಾರೆ.
ಗಣಪತಿ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ. ಅದು ಸುಳ್ಳು ಎಂದಾದರೇ ಕುರುಡುಮಲೆ ಗಣಪತಿ ನನಗೆ ಏನು ಬೇಕಾದರೂ ಶಾಪ ನೀಡಲಿ. ಈಗಾಗಲೇ ವರ್ಗಾವಣೆ ದಂಧೆ ಶುರುವಾಗಿದೆ. ಎಲ್ಲಾ ವರ್ಗಾವಣೆಗಳು ಸಿದ್ದರಾಮಯ್ಯ ಅವರ ಗಮನಕ್ಕೆ ಬರಬೇಕಂತೆ. ಈ ರೀತಿ ಆದೇಶಿಸಿದ್ದಾರೆ. ವರ್ಗಾವಣೆ ದಂಧೆ ಸುಳ್ಳು ಆದರೆ ಗಣಪತಿ ದೇವಸ್ಥಾನಕ್ಕೆ ಬಂದು ಸಿದ್ದರಾಮಯ್ಯ ಅವರು ಪ್ರಮಾಣ ಮಾಡಲಿ ಎಂದು ಹೇಳಿದ್ದಾರೆ.