ಸುದ್ದಿಒನ್, ಚಿತ್ರದುರ್ಗ, (ಜೂ.16) : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ ಹೊಸದುರ್ಗ, ಚಿನ್ಮೂಲಾದ್ರಿ ರೋಟರಿ ಕ್ಲಬ್ ಚಿತ್ರದುರ್ಗ, ಅಕ್ಷರ ಮಂಟಪ ಪ್ರಕಾಶನ ಬೆಂಗಳೂರು ಹಾಗೂ ಮುಕ್ತ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಎಸ್‍ಆರ್‍ಬಿಎಂಎಸ್ ರೋಟರಿ ಭವನದ ಸಭಾಂಗಣದಲ್ಲಿ ಜೂನ್ 17 ರಂದು ಶನಿವಾರ ಸಂಜೆ ಐದು ಗಂಟೆಗೆ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಇವರ ಅಮೃತ ಭಾರತ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಇವರು ಕೃತಿಯನ್ನು ಲೋಕಾರ್ಪಣೆಗೊಳಿಸುವರು. ಈ ದಿನ.ಕಾಂ ಚಿಂತಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಡಾ.ಹೆಚ್.ವಿ.ವಾಸು ಅಮೃತ ಭಾರತ ಕೃತಿಯನ್ನು ಅವಲೋಕಿಸುವರು. ಹಿರಿಯ ಸಾಹಿತಿ ಪ್ರೊ.ಜಿ.ಶರಣಪ್ಪ ಅಧ್ಯಕ್ಷತೆ ವಹಿಸುವರು. ಸಾಹಿತಿ ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಆಶಯ ನುಡಿಯುವರು.
ಹೊದುರ್ಗದ ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಹಿರಿಯ ವಕೀಲ ಕೆ.ಎಸ್.ಕಲ್ಮಠ್, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕ್ರಪ್ಪ, ಚಿನ್ಮೂಲಾದ್ರಿ ರೋಟರಿ ಕ್ಲಬ್ ಅಧ್ಯಕ್ಷ ಈ.ಅರುಣ್ ಕುಮಾರ್, ಜಿಲ್ಲಾ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಜಿ.ಡಿ.ಕೆಂಚವೀರಪ್ಪ, ಮುಕ್ತ ವೇದಿಕೆ ಸಂಚಾಲಕ ಪ್ರೊ.ಟಿ.ಹೆಚ್.ಕೃಷ್ಣಮೂರ್ತಿ, ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನದ ಚೇತನ್ ಕಣಬೂರು, ಸಾಹಿತಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮುಂತಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ ಹಾಗೂ ಚಿನ್ಮೂಲಾದ್ರಿ ರೋಟರಿಕ್ಷಬ್ ಕಾರ್ಯದರ್ಶಿ ಮಳಲಿ ಶ್ರೀನಿವಾಸ್ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
ನಾಳೆ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ನವರ
ಅಮೃತ ಭಾರತ ಕೃತಿ ಲೋಕಾರ್ಪಣೆ ಹಿನ್ನೆಲೆಯಲ್ಲಿ ಚಂದ್ರಶೇಖರ ತಾಳ್ಯ ಅವರು ತಮ್ಮ ಅಮೂಲ್ಯವಾದ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಅನಿಸಿಕೆಯ ಸಂಪೂರ್ಣ ಮಾಹಿತಿ ಈ ಕೆಳಕಂಡಂತೆ ಇದೆ.
ಜೀವಪರ ಅರ್ಥಶಾಸ್ತ್ರಜ್ಞ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ
ಅರ್ಥಶಾಸ್ತ್ರದ ನಿರ್ಜೀವ ಅಂಕಿ ಸಂಖ್ಯೆಗಳ ಆವರಣದೊಳಗೆ ಜೀವಂತ ಮನುಷ್ಯರನ್ನೂ, ಮತ್ತಿತರ ಜೀವರಾಶಿಗಳನ್ನೂ ಅವು ಬದುಕುವ ಪರಿಸರವನ್ನೂ ತಂದಿಟ್ಟರೆ ಆ ನಿರ್ಜೀವ ಅಂಕಿ ಸಂಖ್ಯೆಗಳೂ ಸಹ ಉಸಿರಾಡಲು ಆರಂಭಿಸುತ್ತವೆ.
ಆರ್ಥಿಕ ವ್ಯವಸ್ಥೆ ಎಂದರೆ ಹಣ ಚಲಾವಣೆಯನ್ನು ದ್ವಿಗುಣಗೊಳಿಸುವುದಾಗಲೀ, ಭೌತಿಕ ಸಂಪತ್ತನ್ನು ಹೆಚ್ಚಿಸುವುದಾಗಲೀ ಅಲ್ಲ ಎಂದು ನಂಬಿ ಅದನ್ನು ವಿರೋಧಿಸಿದ ಮಹತ್ವದ ಜೀವಿಗಳು ತಮ್ಮ ಚಿಂತನೆಯನ್ನು ಜೀವಪರವಾಗಿ ರೂಪಿಸಿಕೊಂಡದ್ದು ಈ ರೀತಿಯ ಅರ್ಥಶಾಸ್ತ್ರದ ವಿವೇಕದ ಮೂಲಕವೇ. ಬಂಡವಾಳಶಾಹಿಗಳ ಗ್ರಹಿಕೆ ಇದಕ್ಕಿಂತ ಭಿನ್ನವಾಗಿರುತ್ತದೆ.
ಬಂಡವಾಳವನ್ನು ಕೇಂದ್ರೀಕೃತ ವೃತ್ತದೊಳಗೆ ಜಮಾಯಿಸಿ ಸಮಾಜವನ್ನೂ ಜೀವ ಪರಿಸರವನ್ನೂ ನಿರ್ಲಕ್ಷಿಸುವುದು ಬಂಡವಾಳಶಾಹಿಯ ಮೂಲಭೂತ ಗುಣ. ಅದು ಜನರನ್ನು ಕಡೆಗಣಿಸಿ ದೇಶ, ದೇಶಭಕ್ತಿ, ಸಂಪತ್ತಿನ ಪ್ರಗತಿ, ಬೃಹತ್ ಉದ್ಯಮ ಹೀಗೆ ಬೃಹದಾಕಾರದ ಚಿಂತನೆಗೆ ವಾಸ್ತವದ ರೂಪ ಕೊಡಲು ಹೆಣಗುತ್ತದೆ. ಅದು ಸರಳತೆ, ನಿರಾಡಂಬರತೆಗಳಿಂದ ಮೈಲಿಗಟ್ಟಲೆ ದೂರವಿರುತ್ತದೆ. ಗಾಂಧಿ, ಲೋಹಿಯಾ, ಶೂಮಾಕರ್, ಡೇವಿಡ್ ಥೋರೋ, ಟಾಲಸ್ಟಾಯ್ ಬಂಡಳಶಾಹಿಯ ಈ ಗ್ರಹಿಕೆಯನ್ನು ವಿರೋಧಿಸಿದರು. ಅವರು ಈ ಬರಹದ ಆರಂಭದಲ್ಲಿ ವಿವರಿಸಿದ ಅರ್ಥಶಾಸ್ತ್ರದ ಗ್ರ್ರಹಿಕೆಗೆ ಜೀವಂತ ರೂಪಕದಂತಿದ್ದರು. ಸಮಾಜ, ದೇಶ ಎಂದರೆ ನಿರ್ಜೀವ ವಸ್ತುಗಳಲ್ಲ ಎಂಬ ಅಗಾಧ ಅರಿವು ಅವರೆಲ್ಲರಿಗೂ ಇತ್ತು. ಅದಕ್ಕಾಗಿಯೇ ಅವರು ಬೃಹತ್ ಯಂತ್ರಗಳನ್ನು ವಿರೋಧಿಸಿದರು.
ಅಭಿವೃದ್ಧಿ ಎಂದರೆ ಮಾನವಶ್ರಮದ ಮೂಲಕವೇ ಸುಖ, ನೆಮ್ಮದಿ, ಸಮೃದ್ಧಿ ಉತ್ಪಾದನೆಯಾಗಬೇಕೇ ವಿನಾ ಯಂತ್ರಗಳ ಮೂಲದಿಂದಲ್ಲ ಎಂಬುದನ್ನು ಅವರು ಪ್ರತಿಪಾದಿಸಿದರು ಮತ್ತು ಆ ತಾತ್ವಿಕತೆಗನುಗುಣವಾಗಿ ಬದುಕಿಯೂ ತೋರಿಸಿದರು. ಗಾಂಧೀಜಿ ಯಂತ್ರವಿರೋಧಿಯಾಗಿರಲಿಲ್ಲ ಆದರೆ ಆ ಯಂತ್ರಗಳನ್ನು ಬಳಸಿ ಅಭಿವೃದ್ಧಿ ಸಾಧಿಸಬೇಕೆನ್ನುವ ಮನೋಭಾವದ ವಿರುದ್ಧವಿದ್ದರು.
ಈ ಸೂಕ್ಷ್ಮತೆಯನ್ನು ಅರಿಯದವರು ಯಂತ್ರವಿರೋಧಿ ಎಂಬ ಹಣೆಪಟ್ಟಿ ಹಚ್ಚಿ ಅವರನ್ನು ಪ್ರಗತಿ ವಿರೋಧಿ ಎಂದು ಬಿಂಬಿಸಲು ಯತ್ನಿಸುತ್ತಾರೆ. ಒಟ್ಟಿನಲ್ಲಿ ಒಂದು ದೇಶದ ಪ್ರಗತಿ, ಅಭಿವೃದ್ಧಿ ಎಂದರೆ ಅಲ್ಲಿನ ಪರಿಸರ, ನೆಲ, ಜಲ, ಗಾಳಿ, ಜನ ಎಲ್ಲವನ್ನೂ ಒಳಗೊಂಡ ಅಭಿವೃದ್ಧಿ. ಶೂಮಾಕರ್ ಗಾಂಧಿಯ ಇಂತಹ ಚಿಂತನೆಯಿಂದ ಪ್ರಭಾವಿತನಾಗಿ ಸರಳವಾದದೇ ಸುಂದರ ಎಂಬುದನ್ನು ಪ್ರಾಯೋಗಿಕವಾಗಿಯೂ ಅನುಷ್ಠಾನಕ್ಕೆ ತಂದ ಅಪೂರ್ವ ಚಿಂತಕ. ನಮ್ಮವರೇ ಆದ ಜೆ.ಸಿ.ಕುಮಾರಪ್ಪ ಈ ಪ್ರಯೋಗ ಮಾಡಿದವರಲ್ಲಿ ಮೊದಲಿಗರು.
ಮೇಲಿನ ಆರ್ಥಿಕ ಚಿಂತನೆಯ ಎಳೆಗಳನ್ನು ಹಿಡಿದು ತಮ್ಮದೇ ಆದ ಆರ್ಥಿಕ ಚಿಂತನೆಯನ್ನು ರೂಪಿಸಿಕೊಂಡವರು ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ. ಅವರಿಗೆ ಬಡವರ ನಗುವಿನ ಶಕ್ತಿ ಗೊತ್ತು. ಹಸಿವಿನ ಹಾಹಾಕಾರದ ಸದ್ದನ್ನು ಕ್ರಮಬದ್ಧವಾಗಿ ಕೇಳಿಸಿಕೊಂಡವರು, ನಿರುದ್ಯೋಗಿ ಸಮೂಹವನ್ನು ಹತ್ತಿರದಿಂದ ಬಲ್ಲವರು. ಸ್ವತಃ ಬಡತತನದ ರುಚಿ ಉಂಡವರು. ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಪಾಠ ಮಾಡುತ್ತಾ ವ್ಯವಹಾರಕ್ಕಷ್ಟೇ ಅದನ್ನು ಸೀಮಿತಗೊಳಿಸಿದರೆ ಅದರಿಂದ ಉಂಟಾಗುವ ಅಪಾಯವನ್ನು ಅರಿತು ಬೋಧನೆಯನ್ನು ಸೃಜನಾತ್ಮಕಗೊಳಿಸಿಕೊಂಡವರು. ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಜನಪರವಾದ ಆಲೋಚನೆಗೆ ಹತ್ತಿರವಿದ್ದವರ ಸಹವಾಸದಲ್ಲಿ ಜನಹಿತದ ಆರ್ಥಿಕ ವ್ಯವಸ್ಥೆಯ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ ತಮ್ಮ ನೆಲಮೂಲದ ಆಶಯಗಳನ್ನು ರೂಢಿಸಿಕೊಂಡವರು.
ಸಮಾಜವನ್ನು ತಮ್ಮ ತೀಕ್ಷ್ಣ ಚಕ್ಷುಗಳಿಂದ ವೀಕ್ಷಿಸುತ್ತಾ, ನಿಶಿತ ಮತಿಯಿಂದ ಅದರ ಮಂಥನ ಮಾಡುತ್ತಾ ಅದರ ಓರೆ ಕೋರೆಗಳನ್ನು ಗುರುತಿಸಿ ಸಮಾಜವನ್ನು ತಿದ್ದುವ ಕಾರ್ಯವನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಕೇವಲ ಕೊರತೆಗಳನ್ನು ಬೆಟ್ಟು ಮಾಡಿ ತೋರಿಸುವುದಷ್ಟೇ ಅಲ್ಲ ಅದರ ದುರಸ್ತಿಗೆ ಯಾವ ಕ್ರಮ ಕೈಗೊಂಡರೆ ಈ ಕುಂದಿನಿಂದ ಪಾರಾಗಬಹುದು ಎಂಬುದನ್ನೂ ಅವರು ಚತುರತೆಯಿಂದ ತೋರಿಸುವ ಕಾರ್ಯವನ್ನೂ ಮಾಡಿದ್ದಾರೆ. ಈ ಕಾರಣದಿಂದಲೇ ಸರ್ಕಾರ ಪ್ರತಿಬಾರಿ ಆಯ-ವ್ಯಯ ಮಂಡಿಸಿದಾಲೂ ತಜ್ಞರ ಅಭಿಪ್ರಾಯಗಳಲ್ಲಿ ಮಲ್ಲಿಕಾರ್ಜುನಪ್ಪನವರ ಅಭಿಪ್ರಾಯವೂ ದಾಖಲಾಗಿರುತ್ತದೆ.
ಕೇವಲ ಜೇಬು ಭರ್ತಿ ಇದ್ದರಷ್ಟೇ ಸಾಲದು ಮನಸ್ಸು ತುಂಬಿರುವುದು ಮುಖ್ಯ ಎಂದುಕೊಂಡೇ ತಮ್ಮ ಜೀವನ ಕ್ರಮವನ್ನು ಊದ್ರ್ವಮುಖಿಯಾಗಿ ಬೆಳೆಸಿಕೊಂಡ ಮಲ್ಲಿಕಾರ್ಜುನಪ್ಪ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಶೂಮಾಕರ್ ಮೊದಲಾದ ಮಹತ್ವದ ಚಿಂತಕರಿಂದ ಸಾಕಷ್ಟು ಕಲಿತವರು. ಹಾಗಾಗಿಯೇ ಅವರ ಚಿಂತನೆ ನೆಲಕ್ಕೆ ಹತ್ತಿರದ್ದಾಗಿರಬಲ್ಲದು. ಅವರ ಡಾಕ್ಟೋರಲ್ ಥೀಸಿಸ್ ಕಂಬಳಿ ನೆಯ್ಯುವವರ ಬಗ್ಗೆಯೇ ಇರುವುದು ಅವರ ಚಿಂತನೆಯ ಗುರಿ ಮತ್ತು ಸ್ಪಷ್ಟತೆಯನ್ನು ತೋರಬಲ್ಲದು.
ವಿನಯಶೀಲತೆ, ಕಲಿಸಿದ ಗುರು ಹಿರಿಯರ ಬಗೆಗಿನ ಆಸ್ಥೆ, ನೊಂದವರ ಪರವಾದ ಪ್ರಾಮಾಣಿಕ ದನಿ, ಸಮಾಜಮುಖಿಯಾದ ಸಕಾರಾತ್ಮಕ ಕಾಳಜಿಯಿಂದಾಗಿ ಅವರ ಚಿಂತನೆಗೆ ಒಂದು ಗುರುತ್ವ ಲಭಿಸಿದೆ. ಅವರ ಮೊದಲ ಪ್ರಕಟಿತ ಪುಸ್ತಕ ‘ಬೋಧಿ ವೃಕ್ಷದ ಕೆಳಗೆ’, ಅದರ ಹೆಸರೇ ಅವರ ಚಿಂತನೆಯ ದಿಕ್ಕನ್ನು ಸ್ಪಷ್ಟಪಡಿಸಬಲ್ಲದು.
ಅದು ಪ್ರಕಟವಾದ ಹೊತ್ತಿನಲ್ಲೇ ಈ ಲೇಖಕನಲ್ಲೇನೋ ವಿಶೇಷತೆ ಎಂದುಕೊಂಡದ್ದು ಅತಿಶಯವೇನೂ ಅಲ್ಲ. ನಂತರದಲ್ಲಿ ಅವರ ಆರ್ಥಿಕ ಚಿಂತನೆಯ ಬರಹಗಳು ಚಿಂತನೆಯ ಗತಿಶೀಲತೆಗೆ ಪುರಾವೆಯನ್ನೊದಗಿಸಿದವು. ನಾಡಿಗೆ ಇಂತಹ ಚಿಂತಕರ ಅಗತ್ಯ ಎಂದಿಗಿಂತ ಇಂದಿನ ಈ ಬಿಕ್ಕಟ್ಟಿನ ಕಾಲದಲ್ಲಿ ಬಹಳಷ್ಟಿದೆ.
ಬಂಡವಾಳಶಾಹೀ ಪ್ರೇರಿತ ಕೇಂದ್ರೀಕೃತ ಆಯ-ವ್ಯಯದ ಸಂದರ್ಭದಲ್ಲಿ ವಿಕೇಂದ್ರೀಕೃತ ಚಿಂತನೆಯ ಆರ್ಥಿಕತೆಯನ್ನು ಪಟ್ಟು ಹಿಡಿದು ಸಾಧಿಸಬೇಕಾದ ತುರ್ತು ಎಂದಿಗಿಂತಲೂ ಇಂದು ಹೆಚ್ಚೇ ಇದೆ. ಬಡತನ, ಹಸಿವು, ಆರೋಗ್ಯ, ಲಿಂಗತಾರತಮ್ಯ, ಕೃಷಿ ಸಂಕಷ್ಟಗಳು, ಜಾತಿ ವಿಂಗಡಣೆ, ಸಾಮಾಜಿಕ ಅಸಹನೆ, ಧಾರ್ಮಿಕ ಅಸಹಿಷ್ಣುತೆ, ಈ ಎಲ್ಲ ಪಿಡುಗುಗಳಿಗೂ ಮೂಲ ಧಾತುವೇ ಸಕಾರಾತ್ಮಕ ಹಾಗೂ ನೆಲಮೂಲ ಚಿಂತನೆಯ ಆರ್ಥಿಕ ವ್ಯವಸ್ಥೆ. ಸಾಮಾಜಿಕ ಏಣಿ ಶ್ರೇಣಿಗಳ ನಿರ್ಮೂಲನೆಗೆ ಬೇಕಾದ ಆರೋಗ್ಯಕರ ವಾತಾವರಣ ನಿರ್ಮಾಣ ಬಹು ಅಗತ್ಯಗಳಲ್ಲೊಂದು. ಕೇವಲ ಆರ್ಥಿಕ ತಜ್ಞರಷ್ಟೇ ಆಗಿರದೆ ಸೃಜನಶೀಲ ಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ಮಲ್ಲಿಕಾರ್ಜುನಪ್ಪ, ಈ ನಿಟ್ಟಿನ ಆರೋಗ್ಯಕರ ಚಿಂತಕರು ಮತ್ತು ಆಡಳಿತ ತಜ್ಞರು.
ಇಂದು ಅವರ ‘ಅಮೃತ ಭಾರತ’ (ಸ್ವಾತಂತ್ರ್ಯೋತ್ತರ ಭಾರತದ ಅಭಿವೃದ್ಧಿ ಕಥನ) ಲೋಕಾರ್ಪಣೆಗೊಳ್ಳುತ್ತಿದೆ. ಈ ಬೃಹತ್ ಕೃತಿ ಅವರ ಚಿಂತನ ಲಹರಿಯನ್ನೂ ಅದರ ನಿರ್ದಿಷ್ಠ ಗತಿಯನ್ನೂ ಗುರುತಿಸಲು ಸಾಕಷ್ಟು ಮಾಹಿತಿಯನ್ನು ಒದಗಿಸಬಲ್ಲುದು. ಈ ಅಮೃತದ ಹೊತ್ತಿನಲ್ಲಿ ಅವರನ್ನು ಅಭಿನಂದಿಸುತ್ತಾ ಅವರಿಂದ ಮತ್ತಷ್ಟು ಉತ್ಕøಷ್ಠವಾದ ಚಿಂತನೆಯ ಬರಹಗಳು ಬಂದು ನಾಡಿನ ಹಿತವನ್ನು ಕಾಯುವಂತಾಗಲಿ ಎಂದು ಹಾರೈಸೋಣ.
-ಚಂದ್ರಶೇಖರ ತಾಳ್ಯ