ಚಿತ್ರದುರ್ಗ : ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯತ್ತಿರುವ ಎಸ್.ಎಲ್.ವಿ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 02.07.2022, ಶನಿವಾರದಂದು “ಪ್ರತಿಭಾ ಪುರಸ್ಕಾರ ಕಾರ್ಯಕ್ರಮ” ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಸಿ.ಇ.ಓ. ಎಂ.ಸಿ.ರಘುಚಂದನ್ರವರು ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ 2022ರಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಸಂಸ್ಥೆಯ 34 ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಸನ್ಮಾನಿಸಿ, ಅವರ ಭವ್ಯ ಭವಿಷ್ಯಕ್ಕೆ ಶುಭ ಹಾರೈಸಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಎಂ.ಸಿ.ರಘುಚಂದನ್ರವರು, “ವಿದ್ಯಾರ್ಥಿ ಸಮೂಹದಲ್ಲಿ ಇತ್ತೀಚೆಗೆ ಗುರುತರ ಮಾನಸಿಕ ಬದಲಾವಣೆ ಆಗಿದ್ದು, ಕುಟುಂಬ, ಸಮಾಜ, ವಿದ್ಯಾಭ್ಯಾಸ ಮಾಡುವ ಸಂಸ್ಥೆಗಳೊಂದಿಗೆ ಹೆಚ್ಚಿನ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು. ಶಿಸ್ತು ಪ್ರತಿ ಸಾಧನೆಯ ಅಡಿಪಾಯ.” ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸುವುದರ ಜೊತೆಗೆ ಎಚ್ಚರಿಕೆಯ ಮಾತುಗಳನ್ನು ಆಡಿದರು.
ರಾಜ್ಯ ಮಟ್ಟದಲ್ಲಿ 9ನೇ ರ್ಯಾಂಕ್ ಪಡೆದು, ಚಿತ್ರದುರ್ಗ ನಗರಕ್ಕೆ ಪ್ರಥಮ ಸ್ಥಾನ ಗಳಿಸಿ, ಪ್ರತಿಭಾ ಪುರಸ್ಕಾರಕ್ಕೆ ಭಾಜನನಾದ ಚಿ. ಬಸವರಾಜು.ಕೆ., ಸಂಸ್ಥೆಯ ಶೈಕ್ಷಣಿಕ ವ್ಯವಸ್ಥೆ ಅತ್ಯಂತ ಉತ್ತಮ ದರ್ಜೆಯಾದ್ದಾಗಿದ್ದು, ಮುಂಬರುವ ನೀಟ್ 2022ರ ಪರೀಕ್ಷೆಯಲ್ಲೂ ಉಚಿತ ಮೆಡಿಕಲ್ ಸೀಟ್ ಪಡೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸುತ್ತಾ, ಎಸ್.ಎಲ್. ವಿ. ಪದವಿಪೂರ್ವ ಕಾಲೇಜು ಚಿತ್ರದುರ್ಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ಆಶಾಕಿರಣವೆಂದು ತನ್ನ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದನು.
ಮತ್ತೋರ್ವ ಅತಿಥಿಯಾಗಿ ಆಗಮಿಸಿದ್ದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಂಯೋಜಕರಾದ ಆರ್. ಎಸ್. ರಾಜುರವರು “ಎಸ್. ಎಲ್. ವಿ ಪದವಿಪೂರ್ವ ಕಾಲೇಜು ಪಿ.ಯು.ಸಿ. ಹಂತದ ಶಿಕ್ಷಣಕ್ಕೆ ಮಾದರಿ ಕಾಲೇಜಾಗಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ತಜ್ಞ ಉಪನ್ಯಾಸಕರ ತಂಡ ಹೊಂದಿದೆ. ಮುಂಬರುವ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗುವ ಎಲ್ಲಾ ಅರ್ಹತೆ ಈ ಕಾಲೇಜಿಗಿದೆ.” ಎಂದು ನುಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿ ಪೋಷಕರು ಮಾತನಾಡಿ, ಅತ್ಯುತ್ತಮ ಫಲಿತಾಂಶ ಪಡೆಯುವಲ್ಲಿ ಸಂಸ್ಥೆಯ ಶ್ರಮವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಶ್ರೀ ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ .ಎ.ಜೆ.ಶಿವಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಎಲ್.ವಿ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೊಟ್ರೇಶ್.ಬಿ.ಎ.ರವರು ವಹಿಸಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕು. ಬಿಂದುಶ್ರೀ ಹಾಗೂ ಸೈಯದ್ ಸರ್ಫರಾಜ್ ನಡೆಸಿಕೊಟ್ಟರು. ಅತಿಥಿಗಳಿಗೆ ಸ್ವಾಗತವನ್ನು ಶ್ರೀ ಹರ್ಷ.ಯು.ರವರು ಕೋರಿದರೆ, ಕು. ಅಮೃತ ರಾಜ್ರವರು ವಂದನಾರ್ಪಣೆ ಮಾಡಿದರು.