ಚಿತ್ರದುರ್ಗ,(ಅಕ್ಟೋಬರ್.16) : ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗಡಿಗ್ರಾಮ ರೇಣುಕಾಪುರ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಗ್ರಾಮದ ಎಲ್ಲ ಓಣಿಗಳಲ್ಲಿ ಸಂಚರಿಸಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ರೇಣುಕಾಪುರ ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಮನೆಯ ಸದಸ್ಯರ ಯೋಗಕ್ಷೇಮ ವಿಚಾರಿಸಿ, ಸಮಸ್ಯೆಗಳ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಬಸ್ ಸೌಕರ್ಯ, ಪಡಿತರ, ವೃದ್ಧಾಪ್ಯ ವೇತನ, ರಸ್ತೆ, ಚರಂಡಿ ಸಮಸ್ಯೆ ಬಗೆಹರಿಸುವಂತೆ ಕೆಲವರು ಮನವಿ ಮಾಡಿದರು.
ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ: ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವಾಗಿದೆ. ಬಾಲ್ಯವಿವಾಹ ನಿಷೇಧಿಸಲಾಗಿದ್ದು, ವಿವಾಹ ಮಾಡಲು ಹುಡುಗಿಯರಿಗೆ ಕನಿಷ್ಟ 18 ಹಾಗೂ ಹುಡುಗರಿಗೆ 21 ವರ್ಷ ನಿಗಧಿಪಡಿಸಲಾಗಿದೆ. ಯಾರು ಕೂಡ 18 ವರ್ಷದೊಳಗಿನ ಹೆಣ್ಣುಮಕ್ಕಳಿಗೆ, 21 ವರ್ಷದೊಳಗಿನ ಹುಡುಗರಿಗೆ ಮದುವೆ ಮಾಡಬೇಡಿ, ಅದು ಅಸಿಂಧು ಆಗುತ್ತದೆ. ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಕಿವಿ ಮಾತು ಹೇಳಿದರು.
ಗ್ರಾಮ ಮನೆಗಳಲ್ಲಿ ಶೌಚಾಲಯಗಳ ಕೊರತೆ ಹೆಚ್ಚಾಗಿದೆ. ಶೌಚಾಲಯಗಳನ್ನು ನಿರ್ಮಿಸಿ, ಹೆಣ್ಣು ಮಕ್ಕಳ ಸುರಕ್ಷತೆಯನ್ನು ಕಾಪಾಡಬೇಕು. ಈ ಕುರಿತು ಗಂಡು ಮಕ್ಕಳಿಗೆ ನೀತಿಪಾಠ ಮಾಡಬೇಕು ಎಂದು ಹೇಳಿದರು. ಗ್ರಾಮದಲ್ಲಿ ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ 1486 ಜನ ಸಂರ್ಪೂಣವಾಗಿ ಲಸಿಕೆಯನ್ನು ಪಡೆದಿದ್ದಾರೆ ಎಂದು ಗ್ರಾಮಸ್ಥರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಒಂದು ತಿಂಗಳ ಮುಂಚಿತವಾಗಿಯೇ ಕಂದಾಯಾಧಿಕಾರಿಗಳು ಈ ಹಳ್ಳಿಗೆ ಭೇಟಿ ನೀಡಿ ಇಲ್ಲಿನ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಿ ಕುಂದು ಕೊರತೆಯ ಸಮಸ್ಯೆ ಬಗೆಹರಿಸುವ ಕಾರ್ಯವನ್ನು ವಿವಿಧ ಇಲಾಖೆಯ ಅಧಿಕಾರಿಗಳು ಮಾಡಿದ್ದಾರೆ ಎಂದು ಹೇಳಿದರು.
ಇತ್ಯರ್ಥ ಪಡಿಸಿದ ಅರ್ಜಿಗಳು: 23 ಪೌತಿ ಖಾತೆಗೆ ಸಂಬಂಧಿಸಿದ ಅರ್ಜಿಗಳು, ಬಗರ್ ಹುಕುಂಗೆ ಸಂಬಂಧಿಸಿದ 142 ಅರ್ಜಿ, 530 ಬೆಳೆ ಪರಿಹಾರ ಅರ್ಜಿಗಳು ಸ್ವೀಕಾರಗೊಂಡಿದ್ದು, ಈ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು.
ಸ್ಮಶಾನ ಒತ್ತುವರಿ ತೆರವು ಹಾಗೂ ಎರಡು ಎಕರೆ ಜಾಗವನ್ನು ಘನತ್ಯಾಜ್ಯ ವಿಲೇವಾರಿಗಾಗಿ ಗ್ರಾಮ ಪಂಚಾಯಿತಿ ಜಾಗವನ್ನು ನೀಡಲಾಗಿದೆ. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯವೇತನ 3 ಅರ್ಜಿಗಳು, ನಿರ್ಗತಿಕ ವಿಧವಾ ವೇತನ 2 ಅರ್ಜಿ, ಸಂಧ್ಯಾ ಸುರಕ್ಷಾ 7 ಅರ್ಜಿ , ಮನಸ್ವಿನಿ 1 ಅರ್ಜಿ ಸೇರಿದಂತೆ ಒಟ್ಟು 13 ಆದೇಶ ಪ್ರತಿಗಳನ್ನು ಫಲಾನುಭವಿಗಳಿಗೆ ನೀಡಲಾಯಿತು.
ಚಳ್ಳಕೆರೆ ತಹಶಿಲ್ದಾರ್ ಎನ್. ರಘುಮೂರ್ತಿ ಮಾತನಾಡಿ ಸರ್ಕಾರ ಆಶಯ ಗ್ರಾಮ ವಾಸ್ತವ್ಯ ಕಾರ್ಯಕ್ರಮವಾಗಿದೆ. ಗ್ರಾಮ ವಾಸ್ತವ್ಯದ ಅಂಗವಾಗಿ ಗ್ರಾಮ ಮನೆಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ, ಅಹವಾಲುಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು.
ಗ್ರಾಮದ ಜನರು ದಿನಪ್ರತಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಗ್ರಾಮದಲ್ಲಿ ವಾಸ್ತವ್ಯ ಮಾಡಿ ಜನರ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಚಳ್ಳಕೆರೆ ತಾಲ್ಲೂಕಿನ 8 ಗ್ರಾಮಗಳನ್ನು ಸಮಸ್ಯೆ ಮುಕ್ತಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ. ಇಡೀ ತಾಲ್ಲೂಕು ಆಡಳಿತ ಗ್ರಾಮಗಳ ಕಲ್ಯಾಣಕ್ಕೆ ಬದ್ದವಾಗಿದೆ ಎಂದರು.
ರೈತ ಸಂಪರ್ಕ ಉಪಕೇಂದ್ರ ಆರಂಭ, ಶೇಂಗಾ ಬೀಜ ವಿತರಣೆ ದಾಸ್ತಾನು ಆರಂಭ, ಆರೋಗ್ಯ ಉಪಕೇಂದ್ರ, ಬಸ್ ಸೌಕರ್ಯ, ರಸ್ತೆ ಅಗಲೀಕರಣ, ಶಾಲಾ ಕಟ್ಟಡ ದುರಸ್ಥಿ, ಬ್ಯಾಂಕ್ ಶಾಖೆ ಮುಂತಾದ ಸೌಕರ್ಯಗಳನ್ನು ಗ್ರಾಮಕ್ಕೆ ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ವತಿಯಿಂದ ಪೋಷಣ್ ಅಭಿಯಾನದಡಿಯಲ್ಲಿ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು. ಎನ್‍ಎಸ್‍ಎಸ್ ಶಿಭಿರಾರ್ಥಿಗಳಿಂದ ಶ್ರಮದಾನ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ನಂದಿನಿ ದೇವಿ, ಚಳ್ಳಕೆರೆ ತಹಶೀಲ್ದಾರ್ ಎನ್. ರಘುಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ರಂಗನಾಥ್, ರೇಣುಕಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಮಕ್ಕ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ, ರೇಣುಕಾಪುರ ಗ್ರಾಮ ಪಂಚಾಯಿತಿ ಸದಸ್ಯರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.