ಕನ್ನಡ ಇಂಡಸ್ಟ್ರಿ ಎಲ್ಲರೂ ತಿರುಗಿ ನೋಡುವಂತೆ ಬೆಳೆಯುತ್ತಿದೆ. ಆದ್ರೆ ಅದಕ್ಕೆ ತಕ್ಕನಾದ, ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತ ಸೌಲಭ್ಯಗಳು ಇದ್ರೆ, ನಮ್ಮ ಇಂಡಸ್ಟ್ರಿ ಇನ್ನು ಎತ್ತರಕ್ಕೆ ಬೆಳೆಯಲು ಸುಲಭವಾಗುತ್ತೆ. ಆ ಕೆಲಸವನ್ನೀಗ ಬುಕ್ಕಾಪಟ್ಟಣ ವಾಸು ಮಾಡ್ತಾ ಇದ್ದಾರೆ.
ಈಗಾಗ್ಲೇ ಬುಕ್ಕಾಪಟ್ಟಣ ವಾಸು ಚಲನಚಿತ್ರ ತರಭೇತಿ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇದೀಗ ಹೊಸ ಸ್ಟುಡಿಯೋವನ್ನ ಸಿದ್ದ ಮಾಡಿದ್ದಾರೆ. ಈ ಸ್ಟುಡಿಯೋದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮಾಡಲಾಗಿದೆ. ಇದರಲ್ಲಿ ಗ್ರೀನ್ ಮ್ಯಾಟ್ ಸ್ಟುಡಿಯೋ, ಎಡಿಟಿಂಗ್ ಸ್ಟುಡಿಯೋ, ರೆಕಾರ್ಡಿಂಗ್ ಸ್ಟುಡಿಯೋ ಎಲ್ಲವೂ ಒಂದೇ ಸೂರಿನಡಿ ರೆಡಿಯಾಗಿದೆ. ಸಿನಿಮಾ ಮಾಡಬೇಕು ಎಂಬ ಕನಸೊತ್ತವರಿಗೆ ಇದು ಹೇಳಿ ಮಾಡಿಸಿದ ಸ್ಟುಡಿಯೋವಾಗಿದೆ. ಯಾಕಂದ್ರೆ ಬರುವಾಗ ಸ್ಕ್ರಿಪ್ಟ್ ಹಿಡಿದು ಬಂದರೇ ಸಾಕು ಹೊರ ಹೋಗುವಾಗ ಮೊದಲ ಪ್ರತಿಯನ್ನೇ ಕೈನಲ್ಲಿಡಿದುಕೊಂಡು ಹೋಗಬಹುದು. ಅಷ್ಟೂ ಸೌಲಭ್ಯವನ್ನ ಬಕ್ಕಾಪಟ್ಟಣ ವಾಸು ಅವರ ಈ ಹೊಸ ಸ್ಟುಡಿಯೋ ಒದಗಿಸಿಕೊಡುತ್ತದೆ.
ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ೩೦ ವರ್ಷಗಳ ಕಾಲ ಬುಕ್ಕಾಪಟ್ಟಣ ವಾಸು ಬರಹಗಾರರಾಗಿ, ಧಾರಾವಾಹಿ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದಾರೆ. ಸೆಂಚುರಿ ಫಿಲ್ಮಂ ಇನ್ಸಿಟಿಟ್ಯೂಟ್ ಮೂಲಕ ಚಲನಚಿತ್ರ ತರಭೇತಿ ನೀಡುತ್ತಿದ್ದಾರೆ. ಇದರೊಂದಿಗೆ ಈಗ ಹೊಸ ಯೋಜನೆಗೂ ಕೈ ಹಾಕಿದ್ದಾರೆ. ಅದುವೇ ಅತ್ಯಾಧುನಿಕ ಸ್ಟುಡಿಯೋ ಕ್ರಿಯೇಟಿವ್ ಟೈಮ್ಸ್ ಇಂಡಿಯಾ ಪ್ರೈ. ಲಿಮಿಟೆಡ್. ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಈ ಸ್ಟುಡಿಯೋ ನಿರ್ಮಾಣವಾಗಿದೆ. ಇದರ ಉದ್ಘಾಟನೆಯೂ ಅದ್ಧೂರಿಯಾಗಿ ನಡೆದಿದ್ದು, ಹಿರಿಯ ಸಾಹಿತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ದೊಡ್ಡರಂಗೇಗೌಡರು, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ದೇಶಕ ಓಂ ಸಾಯಿಪ್ರಕಾಶ್, ಸಂಗೀತ ನಿರ್ದೇಶಕ ವಿ.ಮನೋಹರ್, ಭಾ. ಮ ಹರೀಶ್, ಭಾ.ಮ ಗಿರೀಶ್ ಹಾಗೂ ನಟಿ ಭವ್ಯಶ್ರೀ ರೈ ಇಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದ್ದಾರೆ.
ಬುಕ್ಕಾಪಟ್ಟಣ ವಾಸು ಅವರ ಈ ಕಾರ್ಯಕ್ಕೆ ಅವರ ಗೆಳೆಯ ಶ್ರೀಸಾಯಿಕೃಷ್ಣ ಕೂಡ ಜೊತೆಯಾಗಿದ್ದಾರೆ. ಉದ್ಘಾಟನೆ ಬಳಿಕ ಮಾತನಾಡಿದ ಶ್ರೀಸಾಯಿಕೃಷ್ಣ, ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನೊಳಗೊಂಡ ಸ್ಟುಡಿಯೋ ಇದಾಗಿದೆ. ಈ ಹೆಸರಿಗೆ ತಕ್ಕಂತೆ ಪ್ರತಿ ಹಂತದಲ್ಲೂ ಕ್ರಿಯೇಟಿವಿಟಿ ತರಬೇಕಾಗಿತ್ತು. ವಾಸು ಅವರಲ್ಲಿರುವ ಕ್ರಿಯೇಟಿವಿಟಿ, ನಮ್ಮ ಯೋಚನೆ ಸೇರಿಸಿ ಈ ಸ್ಟುಡಿಯೋ ಬೆಳೆಸುವ ಪ್ರಯತ್ನ ಮಾಡಿದ್ದೇವೆ. ಒಂದೇ ಫ್ಲೋರ್‌ನಡಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನಮ್ಮ ಸ್ಟುಡಿಯೋದಲ್ಲಿ ಒದಗಿಸಲಾಗುತ್ತದೆ, ಹೊಸ ಪ್ರತಿಭೆಗಳಿಗೆ ಸಪೋರ್ಟಿವ್ ಆಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.
ಬುಕ್ಕಾಪಟ್ಟಣ ವಾಸು ಮಾತನಾಡಿ, ಮೊದಲು ಜಾಹೀರಾತಿಗೆಂದೇ ಈ ಸಂಸ್ಥೆ ನಿರ್ಮಿಸಿದ್ದು, ಇದೇ ಬ್ಯಾನರ್‌ನಿಂದ ಈಗ ಹೊಸ ಚಿತ್ರಗಳನ್ನು ಶುರು ಮಾಡುತ್ತಿದ್ದೇವೆ, ಮಾರ್ಕೆಟಿಂಗ್ ಮಾಡಿಕೊಡುತ್ತೇನೆಂದು ಬಂದ ಶ್ರೀಸಾಯಿಕೃಷ್ಣ, ನವೀನ ತಂತ್ರಜ್ಞಾನಗಳನ್ನೊಳಗೊಂಡ ಸ್ಟುಡಿಯೋ ಏಕೆ ಮಾಡಬಾರದು ಎಂದರು. ಎಲ್ಲವೂ ಅಂದುಕೊಂಡಂತೆ ರೆಡಿಯಾಗಿದೆ. ಪ್ರೇಮ್, ಶೇಖರ್, ಪಳನಿ, ರೇಣು ಸ್ಟುಡಿಯೋ ಹೀಗೆ ಬಹಳಷ್ಟು ಸ್ನೇಹಿತರು ಜೊತೆ ಸೇರಿದರು ಎಂದು ಸ್ನೇಹಿತರನ್ನ ನೆನೆದಿದ್ದಾರೆ.
ಪ್ರೊ. ದೊಡ್ಡರಂಗೇಗೌಡರು ಮಾತನಾಡಿ, ನನ್ನ ವಾಸು ಸಂಬಂಧ ತುಂಬಾ ಹಳೆಯದು, ಕುಂಕುಮ ಭಾಗ್ಯ ಎನ್ನುವ ಮೆಗಾಸೀರಿಯಲ್‌ಗೆ ನನ್ನಿಂದ ೧೧ ಹಾಡುಗಳನ್ನು ಬರೆಸಿದ್ದರು. ಇದು ಸೆಂಚುರಿ ಫಿಲಂ ಇನ್ಸಿಟಿಟ್ಯೂಟ್‌ನ ಇನ್ನೊಂದು ಶಾಖೆ ಎನ್ನಬಹುದು. ಅತ್ಯಾಧುನಿಕ ಸ್ಟುಡಿಯೋವನ್ನು ಇಂಥಾ ವಿಷಮ ಸಂದರ್ಭದಲ್ಲಿ ಮಾಡಿದ್ದಾರೆ. ಕಿರುಚಿತ್ರ, ಡಾಕ್ಯುಮೆಂಟರಿಗಳನ್ನು ಸಹ ಇಲ್ಲಿ ಮಾಡಬಹುದಾಗಿದೆ ಎಂದರು.
ಒಟ್ಟಾರೆ, ಕನ್ನಡ ಪ್ರತಿಭೆಗಳಿಗೆ ಬುಕ್ಕಾಪಟ್ಟಣ ವಾಸು ಒಂದೊಳ್ಳೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಎಲ್ಲೆಲ್ಲೋ ಹೋಗುವ ಬದಲಿಗೆ ಒಂದೇ ಸೂರಿನಡಿ, ಕಡಿಮೆ ಖರ್ಚಿನಲ್ಲೂ ಅಂದುಕೊಂಡ ಸಿನಿಮಾ ಸಿದ್ದ ಮಾಡಿಕೊಳ್ಳೋದಕ್ಕೆ ಬುಕ್ಕಾಪಟ್ಟಣ ವಾಸು ನೆರವಿಗೆ ನಿಂತಿದ್ದಾರೆ.