ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.07 : ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಳ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಮಂಡಳಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಲಾಯಿತು.
ದಾವಣಗೆರೆ ರಸ್ತೆಯಲ್ಲಿರುವ ಸಿ.ಪಿ.ಐ. ಕಚೇರಿಯಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‍ನ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇವರುಗಳು ಘೋಷಿಸಿದ ಐದು ಉಚಿತ ಗ್ಯಾರೆಂಟಿಗಳಂತೆ ಅಸಂಘಟಿತ ಕಾರ್ಮಿಕರಿಗೆ ಆರನೇ ಗ್ಯಾರೆಂಟಿಯನ್ನು ಘೋಷಿಸುವಂತೆ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಹದಿನೈದು ಸಾವಿರ, ಸಹಾಯಕಿಯರಿಗೆ ಹತ್ತು ಸಾವಿರ ರೂ. ಆಶಾ ಕಾರ್ಯಕರ್ತೆಯರಿಗೆ ಎಂಟು ಸಾವಿರ ರೂ. ಬಿಸಿಯೂಟ ಕಾರ್ಯಕರ್ತೆಯರಿಗೆ ಆರು ಸಾವಿರ ರೂ.ಗಳ ಗೌರವ ಧನ ಹೆಚ್ಚಳ ಮಾಡುವುದಾಗಿ ನೀಡಲಾಗಿದ್ದ ಭರವಸೆಯನ್ನು ರಾಜ್ಯ ಸರ್ಕಾರ ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯಿದೆ, ಎ.ಪಿ.ಎಂ.ಸಿ.ಕಾಯಿದೆ ರದ್ದುಗೊಳಿಸಿ ರೈತರ ಮೇಲೆ ದಾಖಲಾಗಿರುವ ಎಲ್ಲಾ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು.
ಕಾರ್ಮಿಕರ ದೈನಂದಿನ ಕೆಲಸದ ಅವಧಿಯನ್ನು ಎಂಟು ಗಂಟೆಯಿಂದ ಹನ್ನೆರಡು ಗಂಟೆಗೆ ವಿಸ್ತರಿಸಿ ಬಿಜೆಪಿ. ಸರ್ಕಾರ ಫ್ಯಾಕ್ಟರಿ ಕಾಯಿದೆಗೆ ತಂದಿದ್ದ ತಿದ್ದುಪಡಿಗಳನ್ನು ರದ್ದುಗೊಳಿಸಿ ಹಿಂದಿನಂತೆ ಕೆಲಸದ ಅವಧಿಯನ್ನು ಎಂಟು ಗಂಟೆಗೆ ಮಿತಿಗೊಳಿಸಿ ಮಹಿಳೆಯರು ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುವ ಕಾನೂನು ಹಿಂದಕ್ಕೆ ಪಡೆಯಬೇಕು.
ಕಟ್ಟಡ ಕಾರ್ಮಿಕರ 2021-22 ನೇ ಸಾಲಿನ ಶೈಕ್ಷಣಿಕ ಅರ್ಜಿಗಳಿಗೆ ಕೂಡಲೆ ಸಹಾಯಧನ ಬಿಡುಗಡೆ ಮಾಡಿ ಪಿಂಚಣಿ ಅರ್ಜಿಗಳ ಮಂಜೂರಾತಿ ನಿಯಮವನ್ನು ಸರಳಗೊಳಿಸಿ ಕಟ್ಟಡ ಕಾರ್ಮಿಕರ ಮನೆ ನಿರ್ಮಾಣಕ್ಕೆ ರೂ.ಐದು ಲಕ್ಷ ಸಹಾಯಧನ ನೀಡಬೇಕು.
ರಾಜ್ಯದಲ್ಲಿರುವ ಲಕ್ಷಾಂತರ ಬೀಡಿ ಕಾರ್ಮಿಕರಿಗೆ ಕೇಂದ್ರ ವೆಲ್‍ಫೇರ್ ಫಂಡ್ ವೈದ್ಯಕೀಯ ಸೌಲಭ್ಯಗಳು ಸ್ಥಗಿತಗೊಂಡಿದ್ದು, ಕಾರ್ಮಿಕರ ವಿಮಾ ನಿಗಮದಿಂದ ಎಲ್ಲಾ ವೈದ್ಯಕೀಯ ಸೌಲಭ್ಯ ಮತ್ತು ಸಹಾಯಧನ ಲಭಿಸುವಂತೆ ಕ್ರಮಕೈಗೊಳ್ಳಬೇಕು.
ರಾಜ್ಯದ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು.
ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಖಾಯಂಗೊಳಿಸುವುದಕ್ಕೆ ಸೂಕ್ತ ಯೋಜನೆಯನ್ನು ರೂಪಿಸಬೇಕು. ವರ್ಷಕ್ಕೆ 2500 ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳನ್ನಾಗಿ ಉನ್ನತೀಕರಿಸಿ ಸರ್ಕಾರಿ ಮತ್ತು ಅನುದಾನಿತ ಶಾಲೆ-ಕಾಲೇಜುಗಳಲ್ಲಿ ಖಾಲಿಯಿರುವ ಶಿಕ್ಷಕರ ಮತ್ತು ಬೋಧಕರು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಎರಡು ಲಕ್ಷಕ್ಕೂ ಹೆಚ್ಚಿನ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಒಟ್ಟು ಹದಿನಾರು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಕೋರಿದರು.
ಮಾರುಕಟ್ಟೆ ಪ್ರಾಂಗಣದಲ್ಲಿ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮೃತ ಮಹಿಳೆ ತಿಮ್ಮಕ್ಕಳ ವಿಮಾ ಪಾಲಿಸಿ ಹಣವನ್ನು ಮಗಳು ಶಾಂತಮ್ಮನಿಗೆ ಕೊಡಿಸಿಕೊಡುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಹಮಾಲರ ಸಂಘದಿಂದ ಇದೇ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಲಾಯಿತು.
ಸಿಪಿಐ.ಜಿಲ್ಲಾ ಮಂಡಳಿ ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ರಾಜ್ಯ ಮಂಡಳಿ ಸದಸ್ಯರುಗಳಾದ ಕಾಂ.ಸಿ.ವೈ.ಶಿವರುದ್ರಪ್ಪ, ಟಿ.ಆರ್.ಉಮಾಪತಿ, ತಾಲ್ಲೂಕು ಸಹ ಕಾರ್ಯದರ್ಶಿ ಜಯದೇವಮೂರ್ತಿ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಈ.ಸತ್ಯಕೀರ್ತಿ, ಸಿ.ಪಿ.ಐ.ಮುಖಂಡ ಬಿ.ಬಸವರಾಜಪ್ಪ, ಹೊಸದುರ್ಗದ ಎನ್.ಸಿ.ಕುಮಾರಸ್ವಾಮಿ, ಮೊಳಕಾಲ್ಮುರುವಿನ ಜಾಫರ್‍ಶರೀಫ್, ಹೊಳಲ್ಕೆರೆಯ ಮಹೇಶ್ವರಿ, ಶಿವಲಿಂಗಪ್ಪ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.