ಚಿತ್ರದುರ್ಗ : ಜಿಲ್ಲಾದ್ಯಂತ ಬುಧವಾರ ಸುರಿದ ಹಸ್ತ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ಮುಂಗಾರಿನ ಕೊನೆ ದಿವಸಗಳಲ್ಲಿ ಮಳೆ ಆರಂಭವಾಗಿ ಈರುಳ್ಳಿ, ಶೇಂಗಾ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಸಿದೆ. ಬೆಳಗ್ಗೆಯಿಂದಲೇ ಆರಂಭವಾದ ಮಳೆ ರಾತ್ರಿವರೆಗೂ ಮುಂದುವರೆಯಿತು. ದಿನವಿಡೀ ಕೆಲ ನಿಮಿಷಗಳ ವಿರಾಮ ನೀಡಿ ನಿರಂತರವಾಗಿ ಸುರಿದ ಕಾರಣ ಜನರು ಮನೆ ಬಿಟ್ಟು ಹೊರ ಬರಲಿಲ್ಲ.
ಮಳೆಯ ಆರ್ಭಟ ಜೋರಾಗಿದ್ದ ಕಾರಣ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಸಮಸ್ಯೆ ಅನುಭವಿಸಿದರು. ನಗರದ ಜೆಸಿಆರ್, ಗುಮಾಸ್ತ ಕಾಲನಿ, ಹೊಳಲ್ಕೆರೆ ರಸ್ತೆ ಸೇರಿದಂತೆ ವಿವಿಧೆಡೆಯ ಮನೆಗಳಿಗೆ ನೀರು ನುಗ್ಗಿತು.
ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ವಾಹನ ಸವಾರರು ಮಳೆ ನಡುವೆ ಪರದಾಡಿದರು. ಆಟೋಗಳಿಗೆ ಎಂದಿಗಿಂತ ಡಿಮ್ಯಾಂಡ್ ಹೆಚ್ಚಾಗಿತ್ತು. ಮಳೆಯ ರಭಸಕ್ಕೆ ಎಲ್‌ಐಸಿ ಹೊಂಡ ತುಂಬಿ ಹರಿದಿದ್ದು, ಮುಖ್ಯ ರಸ್ತೆ ಜಲಾವೃತಗೊಂಡಿದೆ.
ತಾಲೂಕಿನ ಸುತ್ತಮುತ್ತಲಿನ ಭಾಗದಲ್ಲಿ ಸಹ ಉತ್ತಮ ಮಳೆಯಾಗಿದೆ. ಕಡ್ಲೆ ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳಲು ಹಾಗೂ ತೋಟಗಾರಿಕೆ ಬೆಳೆಗಳಿಗೆ ಈ ಮಳೆ ಸಹಕಾರಿಯಾಗಿದೆ.