ಬೆಂಗಳೂರು: ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯ ಉಸ್ತುವಾರಿ ನೇಮಕ ಪಟ್ಟಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೆಸರು ಕೈಬಿಟ್ಟಿದ್ದು ಕಣ್ತಪ್ಪಿನಿಂದಾಗಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು .
ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, ವಿಜಯೇಂದ್ರ ಅವರು ಉಪಚುನಾವಣೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ, ಮಸ್ಕಿ ಉಪಚುನಾವಣೆ, ಮಂಡ್ಯ ಕೆ ಆರ್ ಪೇಟೆ, ಶಿರಾದಲ್ಲೂ ಕೆಲಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ವಿಜಯೇಂದ್ರ ಹೆಸರು ಕೈಬಿಟ್ಟಿಲ್ಲ ಎಂದು ಸಮರ್ಥಿಸಿಕೊಂಡರು.
ಇದೇ ಸಂದರ್ಭದಲ್ಲಿ ಆರ್ ಎಸ್ ಎಸ್ ಸಂಘಟನೆಯಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ ಎಂಬ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಆರ್ ಎಸ್ಎಸ್ ಆಡಳಿತ ನಡೆಸುವ ಸಂಸ್ಥೆಯಲ್ಲ ಬದಲಾಗಿ ಸೇವೆ ಮಾಡುವ ಸಂಸ್ಥೆಯಾಗಿದೆ.ಕಾರ್ಯಕರ್ತರಿಗೆ ಸೇವಾ ಮನೋಭಾವ ಬೆಳೆಸುವ ಪ್ರಪಂಚದ ಪ್ರಮುಖ ಸಂಸ್ಥೆ ಆರ್ ಎಸ್ ಎಸ್. ಕುಮಾರಸ್ವಾಮಿ ಬಾಯಿ ಹರಕೆಯಿಂದ ಹಾಗಾದಲ್ಲಿ ನಿಜಕ್ಕೂ ಆಗ ದೇಶಕ್ಕೆ ಒಳ್ಳೆದಾಗುತ್ತದೆ ಎಂದರು.
ಆರ್ ಎಸ್ ಎಸ್ ಎಲ್ಲಿ ಇರತ್ತೋ ಅಲ್ಲಿ ಬಹಳ ಒಳ್ಳೆಯ ಕೆಲಸಗಳಾಗುತ್ತವೆ. ಕುಮಾರಸ್ವಾಮಿಯವರಿಗೆ ಡೌಟ್ ಬೇಡ, ಆರ್ ಎಸ್ ಎಸ್ ಇರುವುದರಿಂದ ದೇಶದಲ್ಲಿ ಒಳ್ಳೆಯ ಕೆಲಸಗಳಾಗುತ್ತಿವೆ.
ಕಾಶ್ಮೀರದಲ್ಲಿ ೩೭೦ ನೇ ವಿಧಿ ಹೋಯ್ತು, ಭಯೋತ್ಪಾದನೆ ನಿರ್ಮೂಲನೆ ಆಯ್ತು, ೪೦೦೦ ಜನ ಅನ್ನೋದು ಬಹಳ ದೊಡ್ಡ ಸಂಖ್ಯೆ ಕುಮಾರಸ್ವಾಮಿ ಬಾಯಿ ಹರಕೆಯಿಂದ ಅಷ್ಟು ಮಂದಿ ಆರ್ ಎಸ್ ಎಸ್ ನವರು ಐಎಎಸ್, ಐಪಿಎಸ್ ಅಧಿಕಾರಿಗಳಾಗಲಿ ಎಂದರು.
ಆರ್ ಎಸ್ ಎಸ್ ಸಂಘಟನೆಯನ್ನು ತಾಲಿಬಾನಿಗಳಿಗೆ ಹೋಲಿಕೆ ಮಾಡುವ ಸಿದ್ದರಾಮಯ್ಯ ಗೆ ತಲೆ ಕೆಟ್ಟಿದೆ.ಅವರನ್ನು ನಿಮ್ಹಾನ್ಸ್ ಗೆ ಸೇರಿಸಬೇಕು ಎಂದ ಅವರು ಅಫ್ಘಾನಿಸ್ತಾನದಲ್ಲಿ ಆಗುವ ಹತ್ಯೆಗಳನ್ನು ಸಿದ್ದರಾಮಯ್ಯ ಒಪ್ಪಿಕೊಳ್ತಾರಾ? ಎಸ್ ಡಿ ಪಿ ಐಯನ್ನು ಒಪ್ಪಿಕೊಳ್ಳುತ್ತಾರಾ? ದೇಶದಲ್ಲಿ ತಾಲಿಬಾನಿಕರಣ ಆಗಬೇಕಾ? ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ನಿಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಆರ್ ಎಸ್ ಎಸ್ ಗೆ ಕಲುಹಿಸಿ ಎಂದು ಹೇಳುತ್ತೇವೆ ಎಂದು ರವಿಕುಮಾರ್ ಹೇಳಿದರು.