ಬೆಂಗಳೂರು: ದಸರಾ ಉತ್ಸವದ ಉದ್ಘಾಟನೆ ಹಾಗೂ ಚಾಮರಾಜನಗರ ಬೋಧನಾ ಆಸ್ಪತ್ರೆ ಉದ್ಘಾಟನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆಯಿಂದ ಎರಡು ದಿನಗಳ ಕಾಲ ಮೈಸೂರು, ಚಾಮರಾಜನಗರ ಜಿಲ್ಲಾ ಪ್ರವಾಸಕ್ಕೆ ತೆರಳುತ್ತಿದ್ದಾರೆ.
ನಾಳೆ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನಿಂದ ಹೊರಡಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಜೆ 4 ಗಂಟೆಗೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಆಯೋಜಿಸಿರುವ ಮೋದಿ ಯಂಗ್ ಉತ್ಸವ ಅಂತ್ಯೋದಯ ಸಮಾರೋಪ ಸಮಾರಂಭದ ಉದ್ಘಾಟನೆ ಮಾಡಲಿದ್ದಾರೆ. ನಂತರ ಸಂಜೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಗೆ ಭೇಟಿ ನೀಡಲಿದ್ದು ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಅಕ್ಟೋಬರ್ 7 ರ ಗುರುವಾರ ಬೆಳಗ್ಗೆ 7 ಗಂಟೆಗೆ ಕೆಆರ್ಎಸ್ ನಿಂದ ಹೊರಡಲಿರುವ ಸಿಎಂ 7.45 ಕ್ಕೆ ಚಾಮುಂಡಿ ಬೆಟ್ಟಕ್ಕೆ ತೆರಳಲಿದ್ದು ನಾಡದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಮಾಡಲಿದ್ದಾರೆ. 8:15 ರಿಂದ 9.30 ರವರೆಗೆ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆ ಯೊಂದಿಗೆ 2021ರ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ನಂತರ 10.40 ಕ್ಕೆ ಮೈಸೂರು ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನ ಸ್ವಾಗತಿಸಲಿದ್ದಾರೆ.ರಾಷ್ಟ್ರಪತಿಗಳೊಂದಿಗೆ ಚಾಮರಾಜನಗರ ಜಿಲ್ಲಾ ಪ್ರವಾಸಕ್ಕೆ ತೆರಳಲಿರುವ ಸಿಎಂ ಬೊಮ್ಮಾಯಿ, ಗುರುವಾರ ಮಧ್ಯಾಹ್ನ 3:30 ರಿಂದ 4.30 ರವರೆಗೆ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವತಿಯಿಂದ ಆಯೋಜಿಸಿರುವ 450 ಹಾಸಿಗೆಯ ಬೋಧನಾ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಸಂಜೆ 4.40 ಕ್ಕೆ ರಾಷ್ಟ್ರಪತಿಗಳನ್ನು ಬೀಳ್ಕೊಡಲಿರುವ ಸಿಎಂ, ಸಂಜೆ 5 ಗಂಟೆಗೆ ಚಾಮರಾಜನಗರದಿಂದ ಹೊರಟು ರಾತ್ರಿ 8ಗಂಟೆಗೆ ಬೆಂಗಳೂರು ತಲುಪಲಿದ್ದಾರೆ.