ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 24 : ಇಲಾಖೆಯ ಯಾವುದೇ ಆದೇಶವಿಲ್ಲದಿದ್ದರೂ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಎಕ್ಸಾಟಿಕ್ ಬಡ್ರ್ಸ್ ಹೌಸ್ ಕಾಮಗಾರಿಯನ್ನು ಕೊಂಡೂರು ನರಸರಾಜು ಹೇಮಂತರಾಜು ಬೆಂಗಳೂರು ಇವರಿಗೆ ಗುತ್ತಿಗೆ ನೀಡಿರುವುದಕ್ಕೆ ಸಂಬಂಧಿಸಿದಂತೆ ವಲಯ ಅರಣ್ಯಾಧಿಕಾರಿ ಅಕ್ಷತಾರವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಗುತ್ತಿಗೆದಾರನ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ರಾಜ್ಯ ಸಂಚಾಲಕ ಗುರುಮೂರ್ತಿ ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರ ಗಮನಕ್ಕೂ ತಾರದೆ ಕೊಂಡೂರು ನರಸರಾಜು ಹೇಮಂತರಾಜು ಇವರಿಗೆ ಗುತ್ತಿಗೆ ನೀಡಿರುವುದನ್ನು ಸಮಗ್ರವಾಗಿ ತನಿಖೆಗೊಳಪಡಿಸಬೇಕು. ಎಕ್ಸಾಟಿಕ್ ಬಡ್ರ್ಸ್ ಮನೆ ನಿರ್ಮಾಣ ಕಾಮಗಾರಿಗೆ ದಿನಾಂಕ;24-1-2023 ರಂದು ಈ ಟೆಂಡರ್ ಪೋರ್ಟ್‍ಲ್ ಮುಖಾಂತರ ಟೆಂಡರ್‍ನಲ್ಲಿ ಗುತ್ತಿಗೆದಾರ ಕೊಂಡೂರು ನರಸರಾಜು ಹೇಮಂತರಾಜು ಇವರು ಸಲ್ಲಿಸಿದ್ದ ದರ ಪಟ್ಟಿ ಅತ್ಯಂತ ಕಡಿಮೆಯಿದ್ದುದರಿಂದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿ ಕರ್ನಾಟಕ ಮೃಗಾಲಯ ಪ್ರಾಧಿಕಾರ ಕೂರ್ಗಳ್ಳಿ ಮೈಸೂರು ಇವರು ಗುತ್ತಿಗೆದಾರರು ಸಲ್ಲಿಸಿದ್ದ ದರವನ್ನು ಅಂಗೀಕರಿಸಿ ಗುತ್ತಿಗೆದಾರರಿಂದ ಭದ್ರತಾ ಠೇವಣಿ ಹಾಗೂ ಟೆಂಡರ್ ವ್ಯತ್ಯಾಸದ ಮೊತ್ತದ ಎಫ್.ಡಿ.ಆರ್. ಪಡೆದು ದಿನಾಂಕ : 15-5-2023 ರಂದು ಎಕ್ಸಾಟಿಕ್ ಬರ್ಡ್ ಮನೆಯ ಕಾಮಗಾರಿ ಕೈಗೊಳ್ಳಲು ಕರಾರು ಒಪ್ಪಂದ ಮಾಡಿಕೊಂಡು ಕಾಮಗಾರಿ ಅವಧಿ ಪೂರ್ಣಗೊಳಿಸಲು ನೀಡಲಾದ ಅವಧಿ ದಿನಾಂಕ : 13-9-2023 ಕ್ಕೆ ಮುಕ್ತಾಯವಾಗಿದ್ದು, ಗುತ್ತಿಗೆದಾರನ ಕೋರಿಕೆ ಮೇರೆಗೆ ಎರಡು ಬಾರಿ ಅವಧಿಯನ್ನು ವಿಸ್ತರಿಸಿ ಒಟ್ಟು 320 ದಿನಗಳ ಕಾಲಾವಕಾಶ ನೀಡಿದ್ದರೂ ಕೂಡ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ಎಕ್ಸಾಟಿಕ್ ಬರ್ಡ್ ಮನೆಯನ್ನು ಮೇಲ್ಚಾವಣಿವರೆಗೆ ಮಾತ್ರ ನಿರ್ಮಿಸಲಾಗಿದೆ. ಚೈನ್‍ಲಿಂಕ್, ಮೆಶ್, ಬೇಲಿ, ಪೇಯಿಂಟಿಂಗ್, ವ್ಯೂಪಾಯಿಂಟ್, ಗ್ಲಾಸ್ ಅಳವಡಿಕೆ, ಎಸ್.ಎಸ್.ರೇಲಿಂಗ್ಸ್ ಇತ್ಯಾದಿ ಕಾಮಗಾರಿ ಇನ್ನು ಬಾಕಿಯಿರುವುದರಿಂದ ಪ್ರಾಣಿ ಹಾಗೂ ಪಕ್ಷಿಗಳ ವೀಕ್ಷಣೆಗೆ ತೊಂದರೆಯಾಗುತ್ತಿದೆ. ಗುತ್ತಿಗೆದಾರನ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಿ ವಲಯ ಅರಣ್ಯಾಧಿಕಾರಿ ಅಕ್ಷತಾರನ್ನು ಸೇವೆಯಿಂದ ಅಮಾನತ್ತುಪಡಿಸಿ ತನಿಖೆ ಒಳಪಡಿಸಬೇಕೆಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ಆಗ್ರಹಿಸಿದರು.
ಇಲ್ಲವಾದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಉಗ್ರ ಹೋರಾಟ ನಡೆಸಲಾಗುವುದೆಂದು ಗುರುಮೂರ್ತಿ ಎಚ್ಚರಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಪ್ಪ, ಶ್ರೀನಿವಾಸ್‍ಮೂರ್ತಿ, ಚಂದ್ರಪ್ಪಜೋಗಿ, ನಾಗೇಂದ್ರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.