ಸುದ್ದಿಒನ್, ಚಿತ್ರದುರ್ಗ, ಜೂನ್. 26 : ಹೊಸದಾಗಿ ಎಲ್ಲಿಯೂ ಖಾಸಗಿ ಅಥವಾ ಎಂಎಸ್‍ಐಎಲ್ ಮದ್ಯದಂಗಡಿಗೆ ಹಾಗೂ ಸಿಎಲ್-7 ಗೂ ಕೂಡ ಅನುಮತಿ ನೀಡುವುದು ಬೇಡ ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಅಬಕಾರ ಇಲಾಖೆ ಉಪ ಆಯುಕ್ತರಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ 2023-24ನೇ ಸಾಲಿನ ಮಾರ್ಚ್ ಅಂತ್ಯದವರೆಗಿನ ಕೆ.ಡಿ.ಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಕ್ಷೇತ್ರದಲ್ಲಿ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಕೂಡಲೆ ಇದರ ಬಗ್ಗೆ ಅಬಕಾರ ಇಲಾಖೆ ಕ್ರಮ ಕೈಗೊಂಡು, ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವನ್ನು ಬಂದ್ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಿಸಿ ಕ್ಯಾಮೆರಾ ಸರಿಪಡಿಸಿ : ಚಿತ್ರದುರ್ಗ ನಗರದಲ್ಲಿರುವ ಸಿಸಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಸಿ.ಸಿ.ಕ್ಯಾಮೆರಾಗಳನ್ನು ಕಳೆದ 4-5 ವರ್ಷದ ಹಿಂದೆ ಹಾಕಿದ್ದಾರೆ. ಸರಿಯಾದ ನಿರ್ವಹಣೆ ಇಲ್ಲ. ಈ ಕುರಿತು ಕ್ರಮವಹಿಸಬೇಕು ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಅವರಿಗೆ ಸೂಚನೆ ನೀಡಿದರು.
ಚಿತ್ರದುರ್ಗ ನಗರದಲ್ಲಿರುವ ಸಿ.ಸಿ.ಕ್ಯಾಮೆರಾಗಳನ್ನು ಸರಿಪಡಿಸಿ, ನಗರಸಭೆ ವತಿಯಿಂದಲೇ ನಿರ್ವಹಣೆ ಮಾಡುತ್ತೇವೆ ಎಂದು ರೇಣುಕಾ ಸಭೆಗೆ ಮಾಹಿತಿ ನೀಡಿದರು.
ಬಯಲುಸೀಮೆಯಲ್ಲಿಯೂ ಅಡಿಕೆಗೆ ಶೀಘ್ರ ಸಹಾಯಧನ ನಿರೀಕ್ಷೆ : ಪ್ರಸ್ತುತ ಅಡಿಕೆ ಬೆಳೆಯನ್ನು ಬೆಳೆಯುತ್ತಿರುವ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಹನಿ ನೀರಾವರಿ ಘಟಕ ಅಳವಡಿಕೆಗೆ ಸಹಾಯಧನ ನೀಡಲಾಗುತ್ತಿದೆ.
ಶೀಘ್ರದಲ್ಲಿಯೂ ಬಯಲುಸೀಮೆಯ ಚಿತ್ರದುರ್ಗ ಜಿಲ್ಲೆಯ ಅಡಿಕೆ ಬೆಳೆಗಾರರಿಗೂ ಸರ್ಕಾರದಿಂದ ಪ್ರೋತ್ಸಾಹ ಧನ ಹಾಗೂ ನರೇಗಾ ಯೋಜನೆಯಡಿ ನೆರವು ನೀಡುವ ಸಂಬಂಧ ಶೀಘ್ರದಲ್ಲಿಯೇ ಸಚಿವ ಸಂಪುಟದ ಅನುಮೋದನೆಯಾಗುವ ನಿರೀಕ್ಷೆ ಇದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಚಿವ ಡಿ. ಸುಧಾಕರ್, ಶಾಸಕರಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ಎಂ.ಚಂದ್ರಪ್ಪ, ಎನ್.ವೈ.ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇರ್ಂದರ್ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಖಲಿಂ ಉಲ್ಲಾ, ರಂಗಸ್ವಾಮಿ, ದೀಪಿಕಾ, ಸತೀಶ್, ತಿಮ್ಮಯ್ಯ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.