ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕಳೆದ ಹದಿನೈದು ದಿನದಿಂದ ಸುರಿಯುತ್ತಿರುವ ಮಳೆ ಜನರನ್ನ ಹೈರಾಣಾಗಿಸಿದೆ. ಭಾರೀ ಮಳೆಯಿಂದಾಗಿ ರಸ್ತೆಗಳ ತುಂಬೆಲ್ಲಾ ನೀರು ನಿಂತಿದೆ.
ರಸ್ತೆ ಮೇಲೆಲ್ಲಾ ನೀರು ತುಂಬಿರೋದಕ್ಕೆ ವಾಹನ ಸವಾರರು ಸುಸ್ತಾಗಿದ್ದಾರೆ. ಯುವಕನೊಬ್ಬ ನೀರು ತುಂಬಿದ ರಸ್ತೆಯಲ್ಲಿ ಬೈಕ್ ಸವಾರಿ ಮಾಡಲು ಹೋಗಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದ. ಆದರೆ ಅದೃಷ್ಟವಶಾತ್ ಆತನನ್ನ ಸ್ಥಳೀಯರು ಕಾಪಾಡಿದ್ದಾರೆ.
ಮಳೆಗೆ ರಸ್ತೆಯೆಲ್ಲಾ ತುಂಬಿ ಹರಿಯುತ್ತಿದೆ. ಗುಡಿ ಬಂಡೆಯ ಅಮಾನಿ ಬೈರಸಾಗರ ಕೆರೆ ಕೋಡಿ ಬಿದ್ದಿದೆ. ಹೀಗಾಗಿ ಗುಡಿಬಂಡೆ ಹಾಗೂ ಚಿಕ್ಕಬಳ್ಳಾಪುರ ರಸ್ತೆ ಸಂಪರ್ಕ ಸಾಧ್ಯವಾಗಿಲ್ಲ. ಕೋಡಿ ಬಿದ್ದು ನೀರು ಹರಿಯುತ್ತಿರುವ ಪರಿಣಾಮ ಅಪಾಯದ ಮುನ್ಸೂಚನೆಯಿದ್ದು, ರಸ್ತೆ ದಾಟಲು ಸಾಧ್ಯವಾಗ್ತಿಲ್ಲ. ನಾಲ್ಕು ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ.
ನೀರಿನ ನಡುವೆ ರಸ್ತೆ ದಾಟುವ ಪ್ರಯತ್ನ ಮಾಡಬೇಡಿ ಎಂದು ಈಗಾಗಲೇ ಸ್ಥಳೀಯರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಆದ್ರೂ ಯುವಕನೋರ್ವ ಬೈಕ್ ನಲ್ಲಿ ರಸ್ತೆ ದಾಟಲು ಹೋಗಿದ್ದಾನೆ. ಇದರ ಪರಿಣಾಮ ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ. ತಕ್ಷಣ ಎಚ್ಚೆತ್ತ ಸ್ಥಳೀಯರು ಟ್ರ್ಯಾಕ್ಟರ್ ನಲ್ಲಿ ಬಂದು ಆ ಯುವಕನನ್ನು ರಕ್ಷಿಸಿದ್ದಾರೆ.