ಬೆಂಗಳೂರಿನಲ್ಲಿ ಬಿಎಂಟಿಸಿಯನ್ನೆ ಜನ ನಂಬಿ ಸಂಚಾರ ಮಾಡುತ್ತಾರೆ. ಸಹಸ್ರಾರು ಸಂಖ್ಯೆಯಲ್ಲಿರುವ ಬಸ್ ಗಳಿಗೆ ಅಷ್ಟೇ ಸಂಖ್ಯೆಯಲ್ಲಿ ಡ್ರೈವರ್ ಕಂಡಕ್ಟರ್ ಗಳು ಇದ್ದಾರೆ. ಇವರಲ್ಲಿ ಶೇಕಡ 40-50 ಮಂದಿಗೆ ಹೃದಯ ಕಾಯಿಲೆ, ಮಧುಮೇಹ, ರಕ್ತನಾಳದ ಸಮಸ್ಯೆ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಜಯದೇವ ಆಸ್ಪತ್ರೆಯ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿದ್ದಾರೆ.
‘ಕಳೆದ 12-13 ತಿಂಗಳಲ್ಲಿ ಸುಮಾರು 8,200 ಬಿಎಂಟಿಸಿ ಚಾಲಕರಿಗೆ ಪರೀಕ್ಷೆ ಮಾಡಲಾಗಿದೆ. ಎಲ್ಲಾ ಚಾಲಕರು ಹೃದಯ ಸಂಬಂಧಿತ ಪರೀಕ್ಷೆಗಳು, ರಕ್ತಪರೀಕ್ಷೆ, ಇಸಿಜಿ ಮತ್ತು ಎಕೋಕಾರ್ಡಿಯೋಗ್ರಾಮ್ ಪರೀಕ್ಷೆಗಳಿಗೆ ಒಳಗಾಗಿದ್ದರು. ಅದರಲ್ಲಿ ಶೇಕಡ 40 ರಷ್ಟು ಚಾಲಕರು ಮಧುಮೇಹಿಗಳು ಹಾಗೂ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರೇ ಆಗಿದ್ದಾರೆ. ಇದರ ಜೊತೆಗೆ ಈಗಾಗಲೇ ಹೃದಯದಲ್ಲಿ ಬ್ಲಾಕೇಜ್ ನಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಶೇಕಡ 5ರಷ್ಟು ಚಾಲಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಅನಿಯಮಿತ ಕೆಲಸದ ಸಮಯ, ಅಸಮರ್ಕಪ ಆಹಾರ ಸೇವನೆ, ವ್ಯಾಯಾಮದ ಕೊರತೆ, ದೂರದ ಪ್ರಯಾಣಕ್ಕಾಗಿ ನಿರಂತರವಾಗಿ ಕುಳಿತುಕೊಳ್ಳುವುದರಿಂದ ಹೃದಯ ಸಂಬಂಧಿ ಕಾಯಿಲೆಗೆ ಗುರಿಯಾಗುತ್ತಾರೆ. ಭಾರತದಲ್ಲಿ ಹೃದಯ ರಕ್ತನಾಳದ ಕಾಯಿಲೆಗಳು ಶೇ.30 ರಷ್ಟು ಸಾವುಗಳಿಗೆ ಕಾರಣವಾಗುತ್ತಿವೆ. ಆರಂಭಿಕ ಹಂತದಲ್ಲಿ ಜನರನ್ನು ಪರೀಕ್ಷಿಸುವುದು ಬಹಳ ಮುಖ್ಯ. ಇದು ಮರಣ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಒತ್ತಡದ ಕೆಲಸವನ್ನು ಹೊಂದಿರುವುದರಿಂದ ಮತ್ತು ಪ್ರತಿದಿನವೂ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಅವರನ್ನು ಪರೀಕ್ಷಿಸುವುದು ಮುಖ್ಯವಾಗಿದೆ. ಇದು ಹೃದಯ ಸಂಬಂಧಿ ಸಮಸ್ಯೆಗಳೊಂದಿಗೆ ಸಂಬಂಧಿಸಿದ ಮತ್ತೊಂದು ಅಂಶವಾಗಿದೆ’ ಎಂದು ಹೇಳಿದ್ದಾರೆ.