ಬೆಂಗಳೂರು: ಸಂಸ್ಕೃತ ಭಾಷೆಯ ವಿಚಾರವಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಸೋಷಿಯಲ್ ಮೀಡಿಯಾದಲ್ಲೂ ಪರ ವಿರೋಧ ಚರ್ಚೆಗಳು ಜೋರಾಗಿವೆ. ಈ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಬಿಜೆಪಿಗೆ ಚಾಟಿ ಬೀಸಿದ್ದಾರೆ.
ಬಿಜೆಪಿ ಸರ್ಕಾರ ಸಂಸ್ಕೃತ ಭಾಷಿಗರ ಮೇಲೆ ತೋರಿಸುತ್ತಿರುವ ಅಗಾಧ ಪ್ರೀತಿಯನ್ನು ಮೂಲೆ ಗುಂಪಾಗಿರುವ ತುಳ ಮತ್ತು ಕೊಡವ ಭಾಷೆ ಮೇಲೂ ತೋರಿಸಲಿ ಎಂದು ಆಗ್ರಹಿಸಿದ್ದಾರೆ. ತುಳು ಮತ್ತು ಕೊಡವ ಸಂಖ್ಯೆಗಿಂತ ಸಂಸ್ಕೃತ ಮಾತೃ ಭಾಷೆಯೆಂದು ದಾಖಲಿಸಿರುವವರ ಸಂಖ್ಯೆ ತೀರಾ ಅಂದ್ರೆ ತೀರಾ ಕಡಿಮೆ ಇದೆ. ಇಷ್ಟು ಕಡಿಮೆ ಸಂಖ್ಯೆ ಇರುವವರ ಮೇಲೆ ಬಿಜೆಪಿ ಸರ್ಕಾರ ತನ್ನ ಅಗಾಧ ಪ್ರೀತಿಯನ್ನ ತೋರಿಸುತ್ತಾ ಬಂದಿದೆ.
ಹಾಗೆ ನೋಡಿದ್ರೆ ನಮ್ಮ ರಾಜ್ಯದಲ್ಲಿ ಈಗಾಗಲೇ ಇರುವ ಸಂಸ್ಕೃತ ವಿವಿಗೆ ಬೇಕಾದಂತ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ. ಆದ್ರೆ ಕೊಡವ ಮತ್ತು ತುಳು ಭಾಷೆಯತ್ತ ದಿವ್ಯ ನಿರ್ಲಕ್ಷ್ಯ ತೋರಿಸಲಾಗಿದೆ. ದೇಶದಲ್ಲಿ ಹಲವಾರು ರಾಜ್ಯಗಳು ಒಂದಕ್ಕಿಂತ ಹೆಚ್ಚು ಭಾಷೆಯನ್ನು ಅಧಿಕೃತವಾಗಿ ಘೋಷಿಸಿಕೊಂಡಿವೆ. ಆದ್ರೆ ಕರ್ನಾಟಕ ರಾಜ್ಯ ಕನ್ನಡ ಒಂದಕ್ಕೆ ಬಿಟ್ಟು ಬೇರೆ ಯಾವುದಕ್ಕೂ ಅಧಿಕೃತ ಸ್ಥಾನ ನೀಡಿಲ್ಲ. ಸಾಕಷ್ಟು ಜನ ಪ್ರತಿದಿನ ಉಪಯೋಗಿಸಿವ ಕೊಡವ, ತುಳು ಭಾಷೆಗಳನ್ನು ಕರ್ನಾಟಕದ ಅಧಿಕೃತ ಭಾಷೆಗಳೆಂದು ಮಾನ್ಯ ಮಾಡಬಹುದಾಗಿದೆ. ಮಾನ್ಯ ಮಾಡದೇ ಇರುವುದರಿಂದ ಕೇಂದ್ರ ಸರ್ಕಾರ ಸುಲಭವಾಗಿ ನುಣುಚಿಕೊಳ್ಳುತ್ತಿದೆ ಎಂದಿದ್ದಾರೆ.